ಚಿತ್ರದುರ್ಗ :  ಹಿಂದೂ ಜನಸಾಗರದಲ್ಲಿ ಮಿಂದೆದ್ದ ಮಹಾಗಣಪತಿ

2 Min Read

 

ಚಿತ್ರದುರ್ಗ, ಸುದ್ದಿಒನ್, (ಸೆ.17) : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿಷ್ಠಾಪಿಸಿದ್ದ ರಾಜ್ಯದಲ್ಲಿಯೇ ಪ್ರಖ್ಯಾತಿ ಪಡೆದಿರುವ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಅಪಾರ ಹಿಂದೂ ಜನಸ್ತೋಮದ ನಡುವೆ ಅದ್ದೂರಿಯಾಗಿ ನೆರವೇರಿತು.

ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು ನೆರವೇರಿದ ನಂತರ
ಬೃಹತ್ ಶೋಭಾಯಾತ್ರೆಗೆ  ವಿಹೆಚ್ ಪಿ ರಾಷ್ಟ್ರೀಯ ಕಾರ್ಯದರ್ಶಿ ಅಂಬರೀಷ್ ಚಾಲನೆ ನೀಡಿದರು.

ನಂತರ ಮಾತನಾಡಿ, ವೀರ ಸಾವರ್ಕರ್ ಅವರಿಗೆ ಯಾರೇ ಅವಹೇಳನ ಮಾಡಿದರೂ ಅವರೆಂದಿಗೂ ನಮ್ಮ ಹೃದಯ ಸಮ್ರಾಜ್ಯದಲ್ಲಿ‌ ನೆಲೆಸಿದ್ದಾರೆ. ಭಾರತ್ ಮಾತಾಕಿ‌ ಜೈ ಎಂಬ ಘೋಷಣೆ ಬರೀ‌ ಘೋಷಣೆಯಲ್ಲ‌ ಅದು ನಮ್ಮೆಲ್ಲರ ಏಕತೆಯ ಸಂಕೇತ ಎಂದರು.

ಈ ಶೋಭಾಯಾತ್ರೆಯು ‌ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮುಂಭಾಗದ ಜೈನಧಾಮದಿಂದ ಮಧ್ಯಾಹ್ನ 12ಕ್ಕೆ ಹೊರಟು
ಮದಕರಿನಾಯಕ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಸಂಗೋಳ್ಳಿಯ ರಾಯಣ್ಣ ವೃತ್ತ ಹಾಗೂ ಕನಕ ವೃತ್ತದದ ಮೂಲಕ
ಯಾತ್ರೆ  ಚಂದ್ರವಳ್ಳಿಯಲ್ಲಿ ಅಂತ್ಯವಾಗಲಿದ್ದು, ಗಣೇಶ ಮೂರ್ತಿಯು ತಡರಾತ್ರಿ ವಿಸರ್ಜನೆಯಾಗಲಿದೆ.

ಈ ಬೃಹತ್ ಶೋಭಾಯಾತ್ರೆಯಲ್ಲಿ ವಾದ್ಯ ಗೋಷ್ಠಿ, ತಮಟೆ, ಡೋಲು, ಗೊಂಬೆ ಕುಣಿತ, ವೀರಗಾಸೆ ಈಗೆ ವಿವಿಧ ಸಾಂಸ್ಕೃತಿಕ
ಕಲಾತಂಡಗಳ ಪ್ರದರ್ಶನ ಮೆರವಣಿಗೆ ಕಳೆ ಹೆಚ್ಚಿಸಿದವು. ವೀರ ಸಾವರ್ಕರ್, ಛತ್ರಪತಿ ಶಿವಾಜಿ ಮಹಾರಾಜ್, ಆಂಜನೇಯಸ್ವಾಮಿ, ಶ್ರೀ ರಾಮನ ಕಲಾಕೃತಿಗಳು ನೋಡುಗರ ಮನಸೆಳೆದವು.

ಹಿಂದೂ ಮಹಾಗಣಪತಿಕೀ ಜೈ, ಜೈ ಶ್ರೀ ರಾಮ್, ವಂದೇ ಮಾತರಂ ಹೀಗೆ ಘೋಷಣೆ ಕೂಗುತ್ತಾ ಕುಣಿದು ಕುಪ್ಪಳಿಸುತ್ತಾ ಸಂಭ್ರಮದಿಂದ ಹೆಜ್ಜೆ ಹಾಕಿದರು. ಇಷ್ಟೇ ಅಲ್ಲದೇ ಶೋಭಾಯಾತ್ರೆಯ ಕೇಂದ್ರ ಬಿಂದುವಾಗಿದ್ದು ಡಿಜೆ ಗಳು. ಡಿಜೆ ಸದ್ದಿಗೆ ಅಲ್ಲಿ ನೆರೆದಿದ್ದ ಅಪಾರ ಜನಸಾಗರ ಹೆಜ್ಜೆ ಹಾಕುತ್ತಾ ಸಾಗುವುದೇ ಶೋಭಾ ಯಾತ್ರೆಯ ವಿಶೇಷ.

ರಾಜಕೀಯ ನಾಯಕರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಕಾರ್ಯಕರ್ತರು ಒಟ್ಟಾಗಿ ಪಾಲ್ಗೊಂಡು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಲಕ್ಷಾಂತರ ಜನರು ಸಾಗರೋಪಾದಿಯಲ್ಲಿ ಕಿಕ್ಕಿರಿದು ಮೆರವಣಿಗೆಯಲ್ಲಿ ಸೇರಿದ್ದರು.
ವಿವಿಧ ಸಂಘ ಸಂಸ್ಥೆಗಳು ನೆರೆದಿದ್ದ ಜನಸ್ತೋಮಕ್ಕೆ ಅಲ್ಲಲ್ಲಿ ನೀರು ಮತ್ತು ಪ್ರಸಾದ ವ್ಯವಸ್ಥೆ ಮಾಡಿದ್ದರು.ರಸ್ತೆಯಲ್ಲಿ ಶೋಭಾಯಾತ್ರೆ ಹೋಗುತ್ತಿದ್ದರೆ ಅದನ್ನು ನೋಡಿ ಕಣ್ತುಂಬಿಕೊಳ್ಳಲು ಜನರು ಕಟ್ಟಡಗಳ ಮೇಲೆ ಹತ್ತಿ ಶೋಭಾಯಾತ್ರೆ ಮತ್ತು ಜನಜಾತ್ರೆ ಎರಡನ್ನೂ ಕಣ್ತುಂಬಕೊಂಡರು.

ಕಣ್ಣು ಹಾಯಿಸಿದಲ್ಲೆಲ್ಲಾ ಜನವೋ ಜನ. ಕಳೆದ ಎರಡು ವರ್ಷಗಳು ಕೋವಿಡ್ ನಿಂದ ಸರಳವಾಗಿ ನೆರವೇರಿದ್ದ ಶೋಭಾಯಾತ್ರೆ ಈ ಬಾರಿ ಅಪಾರ ಸಂಖ್ಯೆಯ ಜನರು ಹಳ್ಳಿ ಹಳ್ಳಿಗಳಿಂದಷ್ಟೇ ಅಲ್ಲದೆ ಪಕ್ಕದ ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯ ಜನರು ಹಿಂದೂ ಮಹಾಗಣಪತಿಯ ಶೋಭಾಯಾತ್ರೆಗೆ ಸಾಕ್ಷಿಯಾದರು. ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧ ರವರೆಗೂ ವಯಸ್ಸಿನ ಅಂತರ ಮರೆತಯ ಎಲ್ಲರೂ ಪಾಲ್ಗೊಂಡು ಶೋಭಾಯಾತ್ರೆಗೆ ಮೆರುಗು ನೀಡಿದರು. ಮತ್ತು ಎಲ್ಲರೂ ತಮ್ಮ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದರು.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿತ್ತು. ಭದ್ರತೆಗೆ ಕೆಎಸ್‌ಆರ್‌ಪಿಯ 8, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಆರ್) 8 ತುಕಡಿ ನಿಯೋಜಿಸಲಾಗಿತ್ತು. 9 ಚೆಕ್‌ಪೋಸ್ಟ್‌ ಸ್ಥಾಪಿಸಿದ್ದು, ಮೆರವಣಿಗೆ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಆಳವಡಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *