ಸುದ್ದಿಒನ್,ಬೆಂಗಳೂರು,ಮೇ.30: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಮೊದಲ ಹಂತದಲ್ಲಿ 40,067 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರಿ ಶಾಲೆಗಳಲ್ಲಿ ಸದ್ಯ 60,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಹಿನ್ನೆಲೆಯಲ್ಲಿ, 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ 40 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 11 ಸಾವಿರ ಪ್ರೌಢಶಾಲಾ ಶಿಕ್ಷಕರು ಸೇರಿದ್ದಾರೆ.

ಮೊದಲ ಹಂತದ ನೇಮಕಾತಿ ವಿವರ:
ಪ್ರಾಥಮಿಕ ಶಾಲೆಗಳಿಗೆ: 30,337 ಅತಿಥಿ ಶಿಕ್ಷಕರು
ಪ್ರೌಢ ಶಾಲೆಗಳಿಗೆ: 9,730 ಅತಿಥಿ ಶಿಕ್ಷಕರು
ಒಟ್ಟು: 40,067 ಅತಿಥಿ ಶಿಕ್ಷಕರು
ಗೌರವ ಧನ ಮತ್ತು ಆಯ್ಕೆ ಪ್ರಕ್ರಿಯೆ: > ನೇಮಕಗೊಳ್ಳುವ ಅತಿಥಿ ಶಿಕ್ಷಕರಿಗೆ ಮಾಸಿಕ ₹12,000 ಗೌರವ ಸಂಭಾವನೆಯನ್ನು ನಿಗದಿಪಡಿಸಲಾಗಿದೆ. ಆಯಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಿಗೆ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದ್ದು, ಕನಿಷ್ಠ ವಿದ್ಯಾರ್ಹತೆ ಮತ್ತು ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸೂಚಿಸಲಾಗಿದೆ.











