Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತೀಯ ರೈಲ್ವೆಯಿಂದ ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ; ರೈಲ್ವೆ ನಿಲ್ದಾಣಗಳಲ್ಲಿ ಇವು ಸಂಪೂರ್ಣ ಉಚಿತ!

---Advertisement---

ದೆಹಲಿ.ಜೂನ್.24: ಮಹಿಳಾ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಅತ್ಯಂತ ಮಹತ್ವದ ಮತ್ತು ಸಂತಸದ ಸುದ್ದಿಯೊಂದನ್ನು ನೀಡಿದೆ. ರೈಲು ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರು ಮುಟ್ಟಿನ ಸಮಸ್ಯೆಯಿಂದ ಎದುರಿಸುವ ಆತಂಕಕ್ಕೆ ರೈಲ್ವೆ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಇನ್ನು ಮುಂದೆ ರೈಲ್ವೆ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಅವರು ಒಂದು ರೂಪಾಯಿ ಕೂಡ ಪಾವತಿಸಬೇಕಾಗಿಲ್ಲ.

ಇದಕ್ಕಾಗಿ ಭಾರತೀಯ ರೈಲ್ವೆ ದೇಶದ ಪ್ರಮುಖ ಟೆಲಿಕಾಂ ಮೂಲಸೌಕರ್ಯ ಸಂಸ್ಥೆಯಾದ ‘ಇಂಡಸ್ ಟವರ್ಸ್’ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.ಈ ಯೋಜನೆಯ ಮೊದಲ ಹಂತವಾಗಿ ದೇಶಾದ್ಯಂತ ಆಯ್ದ ರೈಲ್ವೆ ನಿಲ್ದಾಣಗಳಲ್ಲಿ 500 ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಷಿನ್ ಗಳನ್ನು ಅಳವಡಿಸಲಾಗಿದೆ. ದೆಹಲಿ, ಲಕ್ನೋ, ಅಂಬಾಲಾ, ಫಿರೋಜ್ಪುರ ಮತ್ತು ಮೊರಾದಾಬಾದ್ ವಿಭಾಗಗಳ ವ್ಯಾಪ್ತಿಯ 175 ರೈಲ್ವೆ ನಿಲ್ದಾಣಗಳಲ್ಲಿ ಈಗಾಗಲೇ ಈ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಈ ಸ್ಯಾನಿಟರಿ ನ್ಯಾಪ್ ಕಿನ್ ಗಳು ಮಹಿಳೆಯರಿಗೆ ದಿನದ 24 ಗಂಟೆಯೂ ಉಚಿತವಾಗಿ ಲಭ್ಯವಿರಲಿವೆ.

ಇಂಡಸ್ ಟವರ್ಸ್ ಸಂಸ್ಥೆಯು ತನ್ನ ಸಿಎಸ್ ಆರ್ (CSR) ಉಪಕ್ರಮಗಳಾದ ನಾರಿ ಸಮ್ಮಾನ್ ಮತ್ತು ಪ್ರಗತಿ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ಈ ಕಾರ್ಯಕ್ರಮದಡಿ ಈಗಾಗಲೇ 3 ಕೋಟಿಗೂ ಹೆಚ್ಚು ನ್ಯಾಪ್ಕಿನ್ ಗಳನ್ನು ವಿತರಿಸಲಾಗಿದೆ. ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿರುವ “ಋತುಚಕ್ರ ನೈರ್ಮಲ್ಯ ಯೋಜನೆ”ಯ ಗುರಿಗಳಿಗೆ ಪೂರಕವಾಗಿ ಈ ಅಭಿಯಾನ ನಡೆಯುತ್ತಿದೆ.ಈ ಆಧುನಿಕ ವೆಂಡಿಂಗ್ ಯಂತ್ರಗಳನ್ನು ಇಂಟರ್ನೆಟ್ ಆಫ್ ಥಿಂಗ್ಸ್ (IoT) ತಂತ್ರಜ್ಞಾನದೊಂದಿಗೆ ಜೋಡಿಸಲಾಗಿದೆ. ಯಂತ್ರದಲ್ಲಿ ಪ್ಯಾಡ್ಗಳು ಖಾಲಿಯಾಗುವ ಮುನ್ನವೇ ಕಂಟ್ರೋಲ್ ರೂಮ್ ಸಂದೇಶ ರವಾನೆಯಾಗುತ್ತದೆ. ಇದರಿಂದ ತಕ್ಷಣವೇ ಪ್ಯಾಡ್ಗಳನ್ನು ಮರುಭರ್ತಿ ಮಾಡಲು ಸಾಧ್ಯವಾಗುತ್ತದೆ.

ರೈಲುಗಳಲ್ಲಿ ಪ್ರತಿದಿನ ಲಕ್ಷಾಂತರ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಪ್ರಯಾಣಿಸುತ್ತಾರೆ. ತುರ್ತು ಸಂದರ್ಭಗಳಲ್ಲಿ ನಿಲ್ದಾಣಗಳಲ್ಲಿ ಪ್ಯಾಡ್ಗಳು ಸಿಗದೆ ಅವರು ಪಡುತ್ತಿದ್ದ ತೊಂದರೆಗೆ ಈ ವ್ಯವಸ್ಥೆ ದೊಡ್ಡ ನೆಮ್ಮದಿ ನೀಡಲಿದೆ” ಎಂದು ರೈಲ್ವೆ ಇಲಾಖೆ ಆಶಯ ವ್ಯಕ್ತಪಡಿಸಿದೆ.

ಭಾರತೀಯ ರೈಲ್ವೆ ದೇಶದ ಅತ್ಯಂತ ಬೃಹತ್ ಸಾರಿಗೆ ಜಾಲವಾಗಿದ್ದು, ಇಂತಹ ಸೌಲಭ್ಯ ಒದಗಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಇಂಡಸ್ ಟವರ್ಸ್ ತಿಳಿಸಿದೆ. ತಾಂತ್ರಿಕ ಪರಿಹಾರಗಳನ್ನು ಒದಗಿಸುವಲ್ಲಿ ತಮಗಿರುವ ಅನುಭವವನ್ನು ಸಮಾಜದ ಒಳಿತಿಗಾಗಿ ಬಳಸುತ್ತಿರುವುದಾಗಿ ಕಂಪನಿ ಹೇಳಿದೆ. ಅಲ್ಲದೆ, 2030ರ ವೇಳೆಗೆ ದೇಶದ 15 ಕೋಟಿಗೂ ಹೆಚ್ಚು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವುದೇ ತಮ್ಮ ಕಂಪನಿಯ ಮುಖ್ಯ ಗುರಿಯಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

Join WhatsApp

Join Now

Join Telegram

Join Now