ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 24 : ಮಾನವೀಯ ಮೌಲ್ಯ, ಪ್ರೀತಿ ವಿಶ್ವಾಸದ ಗುಣವುಳ್ಳವರಾಗಿದ್ದ ಸಾಹಿತಿ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪನವರು ಜೀವಿತದ ಕೊನೆಗಾಲದವರೆಗೂ ತುಂಬಾ ಚುರುಕಾಗಿ ಲವಲವಿಕೆಯಿಂದ ಓಡಾಡುತ್ತಿದ್ದರೆಂದು ಪ್ರಾಧ್ಯಾಪಕಿ ತಾರಿಣಿ ಶುಭದಾಯಿನಿ ನೆನಪಿಸಿಕೊಂಡರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ಭವನದಲ್ಲಿ ಬುಧವಾರ ಜಿ.ಎಸ್.ಉಜ್ಜಿನಪ್ಪನವರಿಗೆ ಹಮ್ಮಿಕೊಳ್ಳಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಹುಮುಖ ವ್ಯಕ್ತಿತ್ವವುಳ್ಳವರಾಗಿದ್ದ ಜಿ.ಎಸ್.ಉಜ್ಜಿನಪ್ಪ ಒಂದೆ ಉದ್ಯೋಗ ನೆಚ್ಚಿಕೊಂಡು ಕೂತವರಲ್ಲ. ಶಿಕ್ಷಕರಾಗಿ, ಜಯಲಕ್ಷ್ಮಿ ಮಿಲ್‍ನಲ್ಲಿ ಲೇಬರ್ ಆಫೀಸರ್ ಆಗಿ ಕೆಲಸ ಮಾಡಿದರು. ಕೊನೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿಗಾರರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸಾಹಿತಿ, ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಅವರಲ್ಲಿ ಹಿರಿತನ ಒಳ್ಳೆಯ ಮನಸ್ಸಿತ್ತು. ಎಲ್ಲದಕ್ಕೂ ಮಿಗಿಲಾಗಿ ಪುಸ್ತಕಗಳನ್ನು ಓದುವ ಛಲವಿತ್ತು ಎಂದು ಸ್ಮರಿಸಿದರು.
ಸಮದಾನದ ಬದುಕು ಅವರದಾಗಿತ್ತು. ಒಳ್ಳೆಯ ಹಾಡುಗಾರರಾಗಿದ್ದ ಜಿ.ಎಸ್.ಉಜ್ಜಿನಪ್ಪನವರಲ್ಲಿ ತಲ್ಲೀನತೆಯಿತ್ತು. ಜೀವನಕ್ಕೆ ತೆರೆದುಕೊಳ್ಳುವ ಗುಣ ಹೊಂದಿದ್ದರು. ಭಗವಂತ ಅವರ ಆತ್ಮಕ್ಕೆ ಶಾಂತಿ ಕೋರಲಿ ಎಂದು ಪ್ರಾರ್ಥಿಸಿದರು.
ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ ಜಿ.ಎಸ್.ಉಜ್ಜಿನಪ್ಪನವರ ನಿಧನದಿಂದ ಪತ್ರಕರ್ತರು ಹಾಗೂ ಅಭಿಮಾನಿಗಳಿಗೆ ನೋವುಂಟಾಗಿರಬಹುದು. ಆದರೆ ಮುರುಘಾಮಠ ಒಬ್ಬ ಸದ್ಬಕ್ತನನ್ನು ಕಳೆದುಕೊಂಡಿದೆ. ವಸ್ತು ನಿಷ್ಟವಾಗಿ ವಿಷಯದ ಪರ ನಿಂತು ಪತ್ರಕರ್ತರು ಸುದ್ದಿಗಳನ್ನು ಬರೆಯಬೇಕಿದೆ. ಉಜ್ಜಿನಪ್ಪನವರ ಕುರಿತು ಸಂಗ್ರಹ ಕಿರುಹೊತ್ತಿಗೆಯನ್ನು ಮಠದಿಂದ ಹೊರ ತರುತ್ತೇವೆ. ಯಾರು ಕ್ರಿಯಾಶೀಲತೆ ಮೌಲ್ಯ ತರುವ ರೀತಿಯಲ್ಲಿ ಬದುಕುತ್ತಾರೋ ಅಂತಹವರು ಸ್ಮರಣೆಗೆ ಒಳಗಾಗುತ್ತಾರೆಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ತೊಡರನಾಳ್ ಮಾತನಾಡುತ್ತ ಹಿರಿಯ ಜೀವಿಯಾಗಿದ್ದ ಜಿ.ಎಸ್.ಉಜ್ಜಿನಪ್ಪನವರಲ್ಲಿ ಮೇಲು-ಕೀಳು ಎನ್ನುವ ಭಾವನೆ ಇರಲಿಲ್ಲ. ಕಿರಿಯ ಪತ್ರಕರ್ತರನ್ನು ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಸಹೃದಯಿಯಾಗಿದ್ದ ಅವರ ಅಗಲಿಕೆ ಕೇವಲ ಪತ್ರಕರ್ತರಿಗಷ್ಟೆ ಅಲ್ಲ ಒಡನಾಡಿಗಳಿಗೂ ಅಪಾರ ನೋವುಂಟಾಗಿದೆ ಎಂದು ಹೇಳಿದರು.

ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರಸ್ವಾಮೀಜಿ ಮಾತನಾಡಿ ಯಾರಲ್ಲಿಯೂ ಏನನ್ನು ಬೇಡದೆ ವಿಭಿನ್ನವಾಗಿ ಬದುಕಿದ ಜಿ.ಎಸ್.ಉಜ್ಜಿನಪ್ಪನವರು ಅನೇಕರಿಗೆ ಮಾರ್ಗದರ್ಶಕರಾಗಿದ್ದರು. ಪತ್ರಕರ್ತರು, ಸ್ವಾಮೀಜಿಗಳಿಗೆ ಜಾತಿ ಇರಬಾರದು. ಅನರ್ಹರಿಗೆ ಕೆಲವೊಮ್ಮೆ ಪ್ರಶಸ್ತಿಗಳು ಸಿಗುತ್ತದೆ. ನಿಜವಾದ ಅರ್ಹರನ್ನು ಯಾರು ಗುರುತಿಸುವುದಿಲ್ಲ. ಇದಕ್ಕೆಲ್ಲಾ ಜಾತಿಯ ಪ್ರಭಾವ ಕಾರಣ. ದಯನೀಯ ಸ್ಥಿತಿಯಲ್ಲಿ ಸಮಾಜವಿದೆ ಎಂದು ವಿಷಾಧಿಸಿದರು.

ಸಮಾಜದ ಮಾರ್ಗದರ್ಶಕರು ಸ್ವಾಮೀಜಿಗಳಿಂದ ಹಿಡಿದು ಎಲ್ಲರಿಗೂ ಬೇಕು. ಪ್ರಗತಿಪರ, ಸಮಾಜದ ಪರ, ಜೀವಪರವಾಗಿ ಬದುಕಿದ ಸಾಂಸ್ಕøತಿ ನಾಯಕರನ್ನು ಸ್ಮರಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಬೇಕು. ಆಸ್ತಿ ಬದಲಾವಣೆಯಾಗಬಹುದು. ಆದರ್ಶ ಬದಲಾಗುವುದಿಲ್ಲ. ಜು.6 ರಂದು ಮೃತರ ಕುಟುಂಬದಿಂದ ಹಿರಿಯೂರು ತಾಲ್ಲೂಕಿನ ಗೌನಳ್ಳಿಯಲ್ಲಿ ನುಡಿನಮನ ಏರ್ಪಡಿಸಲಾಗಿದೆ ಎಂದು ನುಡಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡುತ್ತ ಚಿಕ್ಕವರ ಜೊತೆ ಚಿಕ್ಕವರಾಗಿ, ದೊಡ್ಡವರ ಜೊತೆ ದೊಡ್ಡವರಾಗಿ ಬದುಕಿದ ಜಿ.ಎಸ್.ಉಜ್ಜಿನಪ್ಪನವರಲ್ಲಿ ಅಹಂ ಇರಲಿಲ್ಲ. ನನಗೆ ಮಾರ್ಗದರ್ಶಕರಾಗಿದ್ದರು. ಬದುಕಿರುವತನಕ ಒಂದು ದಿನವೂ ಯಾರಿಗೂ ತೊಂದರೆ ಕೊಟ್ಟವರಲ್ಲ. ಬಹುಮುಖ ವ್ಯಕ್ತಿತ್ವವುಳ್ಳ ಅವರು ಎಲ್ಲರೊಂದಿಗೂ ಸಾಮರಸ್ಯದಿಂದ ಇರುತ್ತಿದ್ದರೆಂದು ಗುಣಗಾನ ಮಾಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್, ಎಂ.ಜಿ.ರಂಗಸ್ವಾಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಅಹೋಬಲಪತಿ, ಹಿರಿಯ ಪತ್ರಕರ್ತ ಹೆಂಜಾರಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಬಾಮ.ಬಸವರಾಜಯ್ಯ, ಜಿ.ಎಸ್.ಉಜ್ಜಿನಪ್ಪನವರ ಪುತ್ರಿ ಹೇಮಕ್ಕ ಇವರುಗಳು ವೇದಿಕೆಯಲ್ಲಿದ್ದರು.
ಹಿರಿಯ ಪತ್ರಕರ್ತರುಗಳಾದ ಶ.ಮಂಜುನಾಥ್, ಚಿಕ್ಕಪ್ಪನಹಳ್ಳಿ ಷಣ್ಮುಖ, ರವಿ ಮಲ್ಲಾಪುರ, ಜನಸಾಗರ ಕೃಷ್ಣ, ದರ್ಶನ್, ರಂಗನಾಥ್, ಕೆ.ಎಂ.ಮುತ್ತುಸ್ವಾಮಿ (ಕಣ್ಣನ್) ಅಪರಾಧ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ರೈತ ಮುಖಂಡರುಗಳಾದ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ರುದ್ರಸ್ವಾಮಿ ಚಿಕ್ಕಪ್ಪನಹಳ್ಳಿ,
ಜಿ.ಎಸ್.ಉಜ್ಜಿನಪ್ಪನವರ ಕುಟುಂಬದವರು, ಒಡನಾಡಿಗಳು ಸೇರಿದಂತೆ ದೃಶ್ಯ ಮಾಧ್ಯಮದವರು ನುಡಿ ನಮನದಲ್ಲಿ ಪಾಲ್ಗೊಂಡಿದ್ದರು.
ಜಾನಪದ ಹಾಡುಗಾರ ಹರೀಶ್ ಪ್ರಾರ್ಥಿಸಿದರು. ಪತ್ರಕರ್ತ ರವಿಉಗ್ರಾಣ ಸ್ವಾಗತಿಸಿದರು. ಮತ್ತೊಬ್ಬ ಪತ್ರಕರ್ತ ತಿಪ್ಪೇಸ್ವಾಮಿ ನಾಕಿಕೆರೆ ನಿರೂಪಿಸಿ ವಂದಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














