ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 09 : ವಿ. ಪಾಳ್ಯ ಗೇಟ್ನಿಂದ ಭೀಮಸಮುದ್ರದವರೆಗಿನ ರಸ್ತೆ ದುರಸ್ತಿ ಹಾಗೂ ಗಣಿ ಲಾರಿಗಳ ಸಂಚಾರ ತಡೆಗೆ ಆಗ್ರಹಿಸಿ, ಭೀಮಸಮುದ್ರ ರೈತ ಸಂಘ ಹಾಗೂ ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ವತಿಯಿಂದ ಗುರುವಾರದಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಭೀಮಸಮುದ್ರ ರೈತ ಸಂಘದ ಮುಖಂಡರು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ನಡೆಸಿದ್ದರೂ ಯಾವುದೇ ಪರಿಹಾರ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸತ್ಯಾಗ್ರಹ ಕೈಗೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ಕುರಿತು ಭೀಮಸಮುದ್ರ ರೈತ ಸಂಘದ ಅಧ್ಯಕ್ಷ ಶಂಕರಮೂರ್ತಿ ಮಾತನಾಡಿ, ರೈತರು ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ಗಳನ್ನು ರಸ್ತೆಯಲ್ಲಿ ಓಡಿಸುತ್ತಾರೆ. ಈ ರಸ್ತೆಯು 5 ರಿಂದ 6 ಟನ್ ಭಾರ ತಡೆಯುವ ಸಾಮರ್ಥ್ಯ ಹೊಂದಿದೆ. ಆದರೆ 50 ಟನ್ ತೂಕದ ಗಣಿ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಿ. ಪಾಳ್ಯ ಗೇಟ್ನಿಂದ ಭೀಮಸಮುದ್ರದವರೆಗೆ ರಸ್ತೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಶನಿವಾರ ಪೊಲೀಸ್ ಇಲಾಖೆಯು 16 ಜನ ರೈತರನ್ನು ಕರೆದುಕೊಂಡು ಹೋಗಿ ರಾತ್ರಿ 1 ಗಂಟೆಗೆ ಬಿಡುಗಡೆ ಮಾಡಿದೆ. ನಮಗೆ ಎಷ್ಟೇ ತೊಂದರೆಯಾದರೂ ಈ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ. ಒಂದು ವೇಳೆ ರಸ್ತೆ ನಿರ್ಮಿಸದಿದ್ದರೆ ರಸ್ತೆಯಲ್ಲೇ ಉರುಳು ಸೇವೆ ಮಾಡಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ರೈತ ಸಂಘದ ಮುಖಂಡ ಎಸ್. ಶೈಲೇಂದರ್ ಪಟೇಲ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ದುರಂತ. ಗ್ರಾಮದಿಂದ 200 ಮೀಟರ್ ದೂರದಲ್ಲಿ ಪ್ರತ್ಯೇಕ ರಸ್ತೆ ನಿರ್ಮಿಸಿಕೊಂಡು ಲಾರಿಗಳನ್ನು ಕೊಂಡೊಯ್ಯಬಹುದು. ಆದರೆ ಅದನ್ನು ಮಾಡಲು ಅವರು ಸಿದ್ಧರಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ರಸ್ತೆ ಸರಿಪಡಿಸಲು ಅವರಿಂದ ಸಾಧ್ಯವಾಗಿಲ್ಲ. ಈ ದೇಶದಲ್ಲಿ ಸತ್ಯಾಗ್ರಹ ಮಾಡಿದರೆ ಮಾತ್ರ ಪರಿಹಾರ ಸಿಗುವಂತಾಗಿದೆ. ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಈ ಸತ್ಯಾಗ್ರಹದಲ್ಲಿ ಗ್ರಾಮದ ಸಾರ್ವಜನಿಕರು ಹಾಗೂ ವಿ. ಪಾಳ್ಯ, ನಲ್ಲಿಕಟ್ಟೆ, ಭೀಮಸಮುದ್ರ ಭಾಗದ ರೈತ ಮುಖಂಡರು ಉಪಸ್ಥಿತರಿದ್ದರು.









