ಬೆಂಗಳೂರು: ರಾಜ್ಯದ ಕ್ರೀಡಾಪಟುಗಳ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 2ರಷ್ಟು ಮೀಸಲಾತಿ ಕಲ್ಪಿಸಲು ಮಹತ್ವದ ತೀರ್ಮಾನ ಕೈಗೊಂಡಿದೆ. ಕರ್ನಾಟಕ ಸಿವಿಲ್ ಸೇವೆಗಳ (Civil Services) ಎಲ್ಲಾ ನೇರ ನೇಮಕಾತಿಗಳಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ.
ಈ ಯೋಜನೆಯು ಕ್ರೀಡಾ ಸಾಧನೆಗೆ ಸೂಕ್ತ ಗೌರವ ನೀಡುವುದರ ಜೊತೆಗೆ, ಯುವ ಪ್ರತಿಭೆಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಉದ್ದೇಶವನ್ನು ಹೊಂದಿದೆ.
ಎಲ್ಲಾ ವರ್ಗಗಳಲ್ಲೂ ಶೇ. 2 ಮೀಸಲಾತಿ:

ಸಾಮಾನ್ಯ ಅರ್ಹತೆ (General Merit), ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಇತರ ಹಿಂದುಳಿದ ವರ್ಗಗಳ (OBC) ಪ್ರತಿಯೊಂದು ಪ್ರವರ್ಗಗಳಲ್ಲಿಯೂ ಶೇ. 2ರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕರಿಗೆ ಮೀಸಲಿರಿಸಲಾಗಿದೆ.
ರಾಜ್ಯ ಸರ್ಕಾರವು ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 2ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಹೊಸ ಅವಕಾಶ ನೀಡುತ್ತಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಅರ್ಹ ಕ್ರೀಡಾಪಟುಗಳಿಗೆ ಮೀಸಲಾತಿ ಹಾಗೂ ಕೃಪಾಂಕಗಳ ಸೌಲಭ್ಯ ದೊರೆಯಲಿದೆ. ಈ ಮೂಲಕ ಕ್ರೀಡಾ ಸಾಧನೆಗೆ ಗೌರವದ… pic.twitter.com/pVRQTHZn8f
— DIPR Karnataka (@KarnatakaVarthe) October 5, 2026
ಅರ್ಹತೆಯ ಮಾನದಂಡ:
ಕನಿಷ್ಠ 10 ವರ್ಷಗಳ ಕಾಲ ಕರ್ನಾಟಕದಲ್ಲಿ ವಾಸವಿದ್ದು (ಡೊಮಿಸೈಲ್), ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಅರ್ಹ ಕ್ರೀಡಾಪಟುಗಳು ಈ ಮೀಸಲಾತಿಗೆ ಅರ್ಹರಾಗಿರುತ್ತಾರೆ.
ಕೃಪಾಂಕಗಳ (Grace Marks) ಸೌಲಭ್ಯ:
ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್ ಸೇರಿದಂತೆ ಅಧಿಸೂಚಿತಗೊಂಡ 34 ಕ್ರೀಡೆಗಳ ಸಾಧನೆಗೆ ಅನುಗುಣವಾಗಿ ಕ್ರೀಡಾಪಟುಗಳಿಗೆ ನೇಮಕಾತಿ ವೇಳೆ ಕೃಪಾಂಕಗಳನ್ನು ನೀಡಲಾಗುತ್ತದೆ.
ರಾಜ್ಯವನ್ನು ಪ್ರತಿನಿಧಿಸಿ ಕ್ರೀಡಾ ಕ್ಷೇತ್ರದಲ್ಲಿ ಕೀರ್ತಿ ತಂದ ಪ್ರತಿಭೆಗಳಿಗೆ ಸರ್ಕಾರಿ ಉದ್ಯೋಗದ ಹೊಸ ಬಾಗಿಲು ತೆರೆದಂತಾಗಿದ್ದು, ಕ್ರೀಡಾ ವಲಯದಲ್ಲಿ ಈ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.












