ಸುದ್ದಿಒನ್,ಚಿತ್ರದುರ್ಗ.ನ.26: ಉತ್ತಮ ಗುಣಮಟ್ಟದ ರಸ್ತೆಗಳಿದ್ದರೂ, ವಾಹನ ಸವಾರ ಅಜಾಗರೂಕ ಚಾಲನೆಯಿಂದ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿತ್ತಿರುವುದ ಕಳವಳಕಾರಿ ಸಂಗತಿಯಾಗಿದೆ. ಮುಖ್ಯವಾಗಿ ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರೇ ಗಂಭೀರ ಗಾಯ ಅಥವಾ ಮರಣಕ್ಕೆ ತುತ್ತಾಗುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಬೇಕು. ಮುಖ್ಯವಾಗಿ ಎಲ್ಲಾ ಸರ್ಕಾರಿ ನೌಕರರು ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ, ಇತರರಿಗೆ ಮಾದರಿಯಾಗಿರಬೇಕು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಗುರುವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸ ಅವರು ಮಾತನಾಡಿದರು.
ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು, ಸಮುದಾಯ ಭವನಗಳಲ್ಲಿ ಹೆಲ್ಮೆಟ್ ಧರಿಸದೆ ಆಗಮಿಸುವ ವಾಹನ ಸವಾರಿಗೆ ಪಾರ್ಕಿಂಗ್ ಅವಕಾಶ ನೀಡಬಾರದು. ಸಂಚಾರಿಯ ನಿಯಮಗಳ ಪಾಲನೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಒಳಗಾಗದಂತೆ ತಡೆಯಲು, ಸಾರಿಗೆ ಇಲಾಖೆಯಿಂದ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳು ಪಾಲನೆಯೊಂದಿಗೆ ವಾಹನ ಕಲಿಕಾ ಪರವಾನಿಗೆ ಹಾಗೂ ವಾಹನ ನಡೆಸುವ ಪರವಾನಿಗೆ ನೀಡಲು ಅಭಿಯಾನಗಳನ್ನು ನಡೆಸಬೇಕು. ಕಾರು ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಪಥ ಶಿಸ್ತಿನೊಂದಿಗೆ ಹೆದ್ದಾರಿಗಳಲ್ಲಿ ವಾಹನ ಚಲಾಯಿಸಬೇಕು. ನಿಯಮ ಉಲಂಘಿಸುವವರಿಗೆ ಮುಲಾಜು ತೋರದೆ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಹೇಳಿದರು.
ಅಪಘಾತ ವಲಯಗಳಿಗೆ ಭೇಟಿ ನೀಡಿ ವರದಿ ಸಲ್ಲಿಕೆಗೆ ನಿರ್ದೇಶನ :
ಜಿಲ್ಲೆಯಲ್ಲಿ ಪ್ರಮುಖ ಹೆದ್ದಾರಿ ಜಾಲಗಳು ಹಾದು ಹೋಗಿವೆ. ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸ್, ಲೋಕೋಪಯೋಗಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಸಂಬಂದ ಪಟ್ಟ ವ್ಯಾಪ್ತಿಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಭೇಟಿ ಸ್ಥಳ ವರದಿಯನ್ನು ಸಲ್ಲಿಸಬೇಕು. ಅಪಘಾತದ ಕಾರಣಗಳನ್ನು ತಿಳಿದು, ಸೂಕ್ತ ರಸ್ತೆ ಫಲಗಳನ್ನು ಅಳವಡಿಸಬೇಕು.
ಹಿರಿಯೂರು ನಗರದ ಬೈಪಾಸ್ ಬಳಿ ಲಾರಿಗಳು ನಿಲ್ಲುವುದರಿಂದ ಸಂಚಾರಿ ದಟ್ಟಣೆ ಹೆಚ್ಚಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸೇಕು. ಚಿತ್ರದುರ್ಗ-ಹೊಳಲ್ಕೆರೆ ರಸ್ತೆಯಲ್ಲಿ ಅಗತ್ಯ ರಸ್ತೆ ಫಲಗಳು, ರೇಡಿಯಂ ಸ್ಟಿಕರ್ಸ್, ಫ್ಲಿಕರ್ಸ್ ಗಳನ್ನು ಅಳವಡಿಸಲು ಸಂಬಂಧ ಪಟ್ಟ ಹೆದ್ದಾರಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ನಿರ್ದೇಶನ ನೀಡಿದರು.
ಚಿತ್ರದುರ್ಗ ನಗರ ಹಳೆ ಬೈಪಾಸ್ ರಸೆ ವಿದ್ಯುತೀಕರಣಕ್ಕೆ ರೂ.8.75 ಕೋಟಿ ವೆಚ್ಚದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಜೆ.ಎಂ.ಐ.ಟಿ ಬಳಿ ಸೈಕ್ ವಾಕ್ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಸೇವ್ ಲೈಫ್ ಪೌಂಡೇಷನ್ ವತಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಜರುಗಿದ ಅಪಘಾತಗಳು ಹಾಗೂ ಅಪಘಾತಗಳಲ್ಲಿ ಮರಣ ಪ್ರಮಾಣ ತಗಿಸಲು ರೂಪಿಸಿರುವ ವೈಜ್ಞಾನಿಕ ವರದಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆದ್ಧಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸುನೀಲ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಂ.ಸಿ.ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾ ವ್ಯಾಪ್ತಿಯ ನಗರ ಸಭೆಗಳ ಆಯುಕ್ತರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿರಿದ್ದರು.









