ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್.26 : ದೇಶದ 140 ಕೋಟಿ ಜನರಿಗೂ ಸಂವಿಧಾನದಡಿ ಸಮಾನತೆಯಿದೆ. ಸಂವಿಧಾನವನ್ನು ಎಲ್ಲರೂ ಓದಿದಾಗ ಮಾತ್ರ ಸಂವಿಧಾನ ಉಳಿಯುತ್ತದೆಂದು ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ಉಪಾಧ್ಯಕ್ಷ ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸಂವಿಧಾನವನ್ನು ರಚಿಸುವ ಮೊದಲು ಡಾ.ಬಿ.ಆರ್.ಅಂಬೇಡ್ಕರ್ ಅನೇಕ ದೇಶಗಳನ್ನು ಸುತ್ತಾಡಿ ಸಾಕಷ್ಟು ಅಧ್ಯಯನ ನಡೆಸಿ ಸಂವಿಧಾನವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 1949, ನ.26 ರಂದು ಸಂವಿಧಾನವನ್ನು ಅರ್ಪಿಸಲಾಯಿತು. ಭಾರತದಲ್ಲಿ ಅನೇಕ ಜಾತಿ, ಧರ್ಮಗಳಿವೆ. ಎಲ್ಲರೂ ಸೌಹಾರ್ಧಯುತವಾಗಿ
ಬದುಕುತ್ತಿದ್ದಾರೆಂದರೆ ಅದಕ್ಕೆ ಸಂವಿಧಾನ ಕಾರಣ. 1991 ರಲ್ಲಿ ನೆಲ್ಸನ್ ಮಂಡೇಲ ಭಾರತಕ್ಕೆ ಬಂದಾಗ ಸಂವಿಧಾನವನ್ನು ತೆಗೆದುಕೊಂಡು ಹೋದರು. ಕಾಂಗ್ರೆಸ್‍ನಿಂದ ಮಾತ್ರ ಸಂವಿಧಾನಕ್ಕೆ ರಕ್ಷಣೆ ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ಸಂವಿಧಾನ ದಿನಾಚರಣೆ ಎನ್ನುವುದು ಕಾಂಗ್ರೆಸ್‍ಗೆ ಹಬ್ಬವಿದ್ದಂತೆ. ಸಂವಿಧಾನ ವಿರೋಧಿಸುವ ಕೆಲವು ಡೋಂಗಿಗಳು ಈಗ ಸಂವಿಧಾನವನ್ನು ಹಿಡಿದುಕೊಂಡು ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ.ಗೆ ಸಂವಿಧಾನ ಆಚರಿಸುವ ನೈತಿಕತೆಯಿಲ್ಲ ಎಂದು ಎಚ್ಚರಿಸಿದ ಅವರು ಸಂವಿಧಾನ ಅಪಾಯದಲ್ಲಿರುವುದರಿಂದ ಎಲ್ಲರೂ ಸಂವಿಧಾನದ ಉಳಿವಿಗಾಗಿ ಹೋರಾಡಬೇಕಿದೆ ಎಂದರು.
ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಮಾತನಾಡುತ್ತ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಕಾಂಗ್ರೆಸ್‍ನಿಂದ ಮಾತ್ರ ಸಂವಿಧಾನ ಉಳಿಸಲು ಸಾಧ್ಯ. ಯಾವುದೇ ಜಾತಿ ತಾರತಮ್ಯವಿಲ್ಲದೆ ಸಂವಿಧಾನ ಎಲ್ಲರಿಗೂ ಸಮಾನತೆ ಕೊಟ್ಟಿದೆ. ನೂರಾರು ದೇಶ ತಿರುಗಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ದೇಶಕ್ಕೆ ನೀಡಿದ್ದಾರೆ. ಜನಸಾಮಾನ್ಯರಿಗೆ ಸಂವಿಧಾನದ ಶಕ್ತಿ ಏನೆಂಬುದನ್ನು ತಿಳಿಸಬೇಕಿದೆ. ಚಿಕ್ಕಂದಿನಿಂದಲೇ ಮಕ್ಕಳು ಸಂವಿಧಾನ ಓದಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಕಾನೂನು ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ನ್ಯಾಯವಾದಿ ಡಿ.ಎಸ್.ಸುದರ್ಶನ್ ಮಾತನಾಡಿ ಸಂವಿಧಾನದ ಮೌಲ್ಯ ಉಳಿಯಬೇಕಾದರೆ ಎಲ್ಲರೂ ಮೂಲಭೂತ ಹಕ್ಕಿನ ಜೊತೆ ಕರ್ತವ್ಯವನ್ನು ತಪ್ಪದೆ ಪಾಲಿಸಬೇಕು. ಸಮಾನತೆ, ಭ್ರಾತೃತ್ವ, ಧಾರ್ಮಿಕ ಸ್ವಾತಂತ್ರ ಸಿಕ್ಕಿದೆಯೆಂದರೆ ಅದಕ್ಕೆ ಸಂವಿಧಾನ ಕಾರಣ. ಹಾಗಾಗಿ ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕೆಂದು ಹೆಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ನಜ್ಮತಾಜ್, ಎಸ್.ಎನ್.ರವಿಕುಮಾರ್, ಹೆಚ್.ಶಬ್ಬೀರ್‍ಭಾಷಾ, ಮಂಜುನಾಥ್, ಪರಿಶಿಷ್ಟ ವರ್ಗ ವಿಭಾಗದ ಅಧ್ಯಕ್ಷ ಮಂಜುನಾಥ್, ಪದವೀಧರ ವಿಭಾಗದ ಅಧ್ಯಕ್ಷ ಪ್ರಕಾಶ್‍ರಾಮನಾಯ್ಕ, ಸೈಯದ್ ಖುದ್ದೂಸ್, ಮಹಮದ್ ಆಜಾಂ, ಬಸಮ್ಮ ಇನ್ನು ಅನೇಕರು ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿದ್ದರು.











