ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್.26 : ಸಂವಿಧಾನ ವಿರೋಧಿ ಮನುವಾದಿಗಳಿಂದ ಸಂವಿಧಾನವನ್ನು ಕೊಲ್ಲುವ ಪ್ರಯತ್ನವಾಗುತ್ತಿರುವುದು ಅಪಾಯಕಾರಿ ಎಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಜೆ.ಯಾದವರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಎದ್ದೇಳು ಕರ್ನಾಟಕ ವತಿಯಿಂದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಚರಿಸಲಾದ ಸಂವಿಧಾನ ದಿನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
1975 ರಲ್ಲಿ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಸಂವಿದಾನದ ಆಶಯಗಳನ್ನು ಬುಡಮೇಲು ಮಾಡಿದರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಎನ್ನುವುದು ಗಾಳಿ ಗೋಪುರವಾಗಿದೆ. ತಾರತಮ್ಯ, ಮಡಿವಂತಿಕೆ, ಜಾತಿಯತೆ, ಅಸ್ಪøಶ್ಯತೆ ಇನ್ನು ಜೀವಂತವಾಗಿದೆ. ಸಂವಿಧಾನಕ್ಕೆ ಪ್ರತಿಯಾಗಿ ಮನುವಾದ ಸಂವಿಧಾನ ದೇಶವನ್ನು ಆಳುತ್ತಿರುವುದನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗಿದ್ದರು ಜಾತಿಯತೆ ಎನ್ನುವುದು ಅಣು ಅಣುವಿನಲ್ಲಿಯೂ ಇದೆ. ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ಪರ್ಸೆಂಟ್ ಮೀಸಲಾತಿ ಕೊಡಲು ಇನ್ನು ಆಗುತ್ತಿಲ್ಲ. ಕೋಮು ಸಾಮರಸ್ಯ ಹೋಗಿ ಕೋಮು ದ್ವೇಷವಾಗಿದೆ. ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಟ ಸಂವಿಧಾನ ನಮ್ಮದು. ತಿದ್ದುಪಡಿ ಮಾಡಲು ಅವಕಾಶವಿದೆ. ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ಸಿಗಬೇಕೆಂಬುದು ಸಂವಿಧಾನದ ಆಶಯ. ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸುವ ರಾಜಕಾರಣಿಗಳು ಜಾಸ್ತಿಯಾಗಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ಅಭಿವ್ಯಕ್ತಿ ಯಾವ ದೇಶದಲ್ಲಿ ಕೊಲೆಯಾಗುತ್ತದೋ ಅಲ್ಲಿ ಪ್ರಜಾಪ್ರಭುತ್ವ ನಾಶವಾಗುತ್ತದೆ. ಸಂವಿಧಾನ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಸಂವಿಧಾನವನ್ನು ಎಲ್ಲರೂ ಅರ್ಥಮಾಡಿಕೊಂಡು ಅದರ ಪ್ರಕಾರ ನಡೆಯಬೇಕೆಂದು ಹೇಳಿದರು.
ಲೇಖಕ ಹೆಚ್.ಆನಂದ್ಕುಮಾರ್ ಮಾತನಾಡಿ ಯಾವ ದೇಶದಲ್ಲಿಯೂ ಇಲ್ಲದ ಅಸ್ಪøಶ್ಯತೆ ಭಾರತದಲ್ಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಬೇರೆ ಬೇರೆ ದೇಶಗಳಲ್ಲಿ ಸುತ್ತಾಡಿ ಸಾಕಷ್ಟು ಅಧ್ಯಯನ ನಡೆಸಿ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಬಲಿಷ್ಟವಾದ ಸಂವಿಧಾನ ನಮ್ಮದು. ಎಲ್ಲರಿಗೂ ಸಮಾನತೆಯನ್ನು ಕೊಟ್ಟಿದೆ. ವಿದ್ಯಾರ್ಥಿಗಳು ಸಂವಿಧಾನವನ್ನು ಓದಬೇಕೆಂದು ಕರೆ ನೀಡಿದರು.
ಸಿ.ಕೆ.ಗೌಸ್ಪೀರ್ ಮಾತನಾಡುತ್ತ ದೇಶದಲ್ಲಿ ಸಮಾನತೆಯಿದೆ ಎಂದರೆ ಅದಕ್ಕೆ ಸಂವಿಧಾನ ಕಾರಣ. ಮನುವಾದಿಗಳಿಂದ ಅರಾಜಕತೆಯಿದೆ. ಸಂವಿಧಾನ ವಿರೋಧಿಗಳು ಸಂವಿಧಾನವನ್ನು ಆಚರಿಸುತ್ತಿದ್ದಾರೆ. ಯುವ ಪೀಳಿಗೆಯಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಬೇಕಿದೆ ಎಂದರು.

ಭೀಮ ಅಧ್ಯಯನ ಕೇಂದ್ರದ ಸಂಸ್ಥಾಪಕಿ ಎಸ್.ಬೈಲಮ್ಮ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಷ್ಟೆ ಸಂವಿಧಾನವನ್ನು ರಚಿಸಿಲ್ಲ. ಕಟ್ಟ ಕಡೆಯ ಶೋಷಿತ ವ್ಯಕ್ತಿಗೂ ಸಂವಿಧಾನದಡಿ ಸಮಾನತೆ ಸಿಗಬೇಕೆನ್ನುವ ದೃಷ್ಟಿಯಿಟ್ಟುಕೊಂಡು ಸಂವಿಧಾನ ರಚಿಸಿದ್ದಾರೆ. ಸಂವಿಧಾನವನ್ನು ಓದಿದರೆ ಶಕ್ತಿ ಬರುತ್ತದೆ. ಸಂವಿಧಾನವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಸದೃಢ ಸಮಾಜವನ್ನು ಕಟ್ಟುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯೋಣ ಎಂದು ನುಡಿದರು.
ಪ್ರಭಾವತಿ ಮಾತನಾಡುತ್ತ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕಿದೆ. ಶಿಕ್ಷಣ, ಸಂಘಟನೆ, ಹೋರಾಟ ಡಾ.ಬಿ.ಆರ್.ಅಂಬೇಡ್ಕರ್ರವರ ಮೂಲ ಮಂತ್ರವಾಗಿತ್ತು. ಹೆಣ್ಣು ಗಂಡೆಂಬ ತಾರತಮ್ಯ ಸಂವಿಧಾನದಲ್ಲಿ ಇಲ್ಲ. ಸಂವಿಧಾನವನ್ನು ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.
ಗೌರಿಶಂಕರ್ ಮಾತನಾಡಿ ಸಂವಿಧಾನವನ್ನು ರಕ್ಷಿಸುವ ಇಚ್ಚಾಶಕ್ತಿ ಯಾವ ಪಕ್ಷದ ರಾಜಕಾರಣಿಗಳಿಗೂ ಇಲ್ಲ. ತಳಮಟ್ಟದವರಿಗೆ ಸಂವಿಧಾನದ ಆಶಯಗಳು ತಲುಪಬೇಕು. ಸಂವಿಧಾನಕ್ಕಿಂತ ಪವಿತ್ರವಾದ ಗ್ರಂಥ ಬೇರೆ ಯಾವುದೂ ಇಲ್ಲ. ಕೋಮುವಾದಿಗಳು ಸಂವಿಧಾನವನ್ನು ನಾಶ ಮಾಡಿ ದೇಶ ಆಳಲು ಹೊರಟಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು. ಜಾತಿಯ ವಿಷ ಬೀಜ ಬಿತ್ತುವ ವಾತಾವರಣ ನಿರ್ಮಾಣವಾಗಿರುವುದರ ವಿರುದ್ದ ಎಚ್ಚರವಾಗಿರಬೇಕೆಂದರು.
ಆಯಿಷ, ಪುರುಷೋತ್ತಮ, ಹೊನ್ನೂರುಸ್ವಾಮಿ, ಹನುಮಂತಪ್ಪ ತಮಟಕಲ್ಲು, ರೂಪ, ಶಿಲ್ಪ, ಶಾಂತ ಇವರುಗಳು ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸಿದ್ದರು.










