ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಯಾವುದೇ ಕಾರಣಕ್ಕೂ ರೈತರು ಭದ್ರಾ ಕಾಲುವೆ ಒಡೆದು ನೀರು ಪಡೆಯುವ ಕೆಲಸಕ್ಕೆ ಮುಂದಾಗಬಾರದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಮನವಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆದಿರಾಳು ಗ್ರಾಮದ ಗೋಕಟ್ಟೆ ಬಳಿ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಯ ನೀರಿಗೆ ಗಂಗಾಪೂಜೆ ನೆರವೇರಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಾಯೋಗಿಕವಾಗಿ ಭದ್ರಾ ಕಾಲುವೆಯಲ್ಲಿ ನೀರು ಹರಿಯುತ್ತಿದ್ದು, ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತದಿಂದ ರೈತರು ಆತಂಕದಲ್ಲಿರುವುದು ಸಹಜವಾಗಿದೆ ಎಂದು ಅವರು ತಿಳಿಸಿದರು. ಆದರೆ ಯಾವುದೇ ಕಾರಣಕ್ಕೂ ರೈತರು ಕಾಲುವೆಗಳನ್ನು ಒಡೆದು ನೀರು ಪಡೆಯುವ ಕೆಲಸಕ್ಕೆ ಮುಂದಾಗಬಾರದು ಎಂದು ಸಚಿವರು ಮನವಿ ಮಾಡಿದರು. ಕಾಲುವೆ ಒಡೆದರೆ ಮುಂದಿನ ಭಾಗದ ಕೆರೆಗಳಿಗೆ ಹಾಗೂ ತಾಲ್ಲೂಕುಗಳಿಗೆ ನೀರು ತಲುಪಲು ಸಾಧ್ಯವಾಗುವುದಿಲ್ಲ.
ಸದ್ಯ ಪ್ರಾಯೋಗಿಕವಾಗಿ ಒಂದೇ ಮೋಟಾರ್ ಚಾಲನೆ ಮಾಡಿ ಕಾಲುವೆಯ ಸುರಕ್ಷತೆ ನೋಡಿಕೊಂಡು ಹಂತಹಂತವಾಗಿ ನೀರು ಹರಿಸಲಾಗುತ್ತಿದ್ದು, ನಿಗದಿತ ಪ್ರಮಾಣದ ನೀರು ತಲುಪಲು ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಸಚಿವರು ವಿವರಿಸಿದರು. ಆದ್ದರಿಂದ ರೈತರು ಸಂಯಮ ಹಾಗೂ ತಾಳ್ಮೆಯಿಂದ ವರ್ತಿಸಿ ನೀರನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಯಮ ಮೀರಿ ಕಾಲುವೆ ಹಾನಿ ಮಾಡಿದರೆ ಅಧಿಕಾರಿಗಳು ಅನಿವಾರ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.











