Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯ ರೈತರ ಜಮೀನಿನಲ್ಲಿ ಬರ ಅಧ್ಯಯನ ತಂಡದಿಂದ ಬರ ವೀಕ್ಷಣೆ : ರೈತರು ಹೇಳಿದ್ದೇನು ?

Facebook
Twitter
Telegram
WhatsApp

ಚಿತ್ರದುರ್ಗ,(ಅ.07) :  ಪ್ರಸಕ್ತ ಸಾಲಿನ ಮುಂಗಾರು ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಅಧ್ಯಯನ ಮಾಡಲು ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದಲ್ಲಿ ಎಂ.ಎನ್.ಸಿ.ಎಫ್.ಸಿ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ. ಶ್ರೀನಿವಾಸ ರೆಡ್ಡಿ ಅವರನ್ನು ಒಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಶನಿವಾರದಂದು ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರು ಮತ್ತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡಿತು.

ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳು ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡ, ಬರ ಕುರಿತು ಮಾಹಿತಿ ಪಡೆಯಿತು.


ಕೇಂದ್ರ ಬರ ಅಧ್ಯಯನ ತಂಡವು ಮೊದಲಿಗೆ ಚಿತ್ರದುರ್ಗ ತಾಲ್ಲೂಕಿನ ವಿಜಾಪುರ ಗ್ರಾಮದ ಮಲ್ಲಿಕಾರ್ಜುನಯ್ಯ ಅವರ ಮೆಕ್ಕೆಜೋಳ, ಎಸ್. ಎಂ. ತಿಪ್ಪೇಸ್ವಾಮಿ ಅವರ ಮೆಕ್ಕೆಜೋಳ ಬೆಳೆ ಮತ್ತು ಸೌಭಾಗ್ಯಮ್ಮ ಅವರ ರಾಗಿ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದರು.  ವಿಜಾಪುರ ಗ್ರಾಮದ ಬೆಳೆ ವೀಕ್ಷಣೆ ನಂತರ ಬಿರಾವರ ಗ್ರಾಮದ ವಿನಯ್, ಪರಮಶಿವಯ್ಯ ಜಮೀನು ಹಾಗೂ ಕುಬೇಂದ್ರ ಹಾಗೂ ಹರೀಶ್ ಬಾಬು ಅವರ ಜಮೀನಿಗೆ ಭೇಟಿ ನೀಡಿ, ಮಳೆ ಕೊರತೆಯಿಂದ ಒಣಗಿದ್ದ ರಾಗಿ ಮತ್ತು ಮೆಕ್ಕೆಜೋಳ ಬೆಳೆ ವೀಕ್ಷಿಸಿದರು.

ಶನಿವಾರದಂದು ಮುಂಜಾನೆಯಿಂದಲೇ ಬರ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲು ತೆರಳಿದ ಕೇಂದ್ರ ಅಧ್ಯಯನ ತಂಡ ಮೊದಲಿಗೆ ತಾಲೂಕಿನ ವಿಜಾಪುರ ಗ್ರಾಮದ ಮಲ್ಲಿಕಾರ್ಜುನಯ್ಯ ಅವರ ಮೆಕ್ಕೆಜೋಳ, ಎಸ್.ಎಂ. ತಿಪ್ಪೇಸ್ವಾಮಿ ಅವರ ಮೆಕ್ಕೆಜೋಳ, ಸೌಭಾಗ್ಯಮ್ಮ ಅವರ ರಾಗಿ ಜಮೀನಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿತು.  ರೈತರು ಹಾಗೂ ಅಧಿಕಾರಿಗಳು ಮಳೆಯ ಕೊರತೆಯಿಂದ ಬೆಳೆ ಹಾನಿಯಾದ ಬಗ್ಗೆ, ಬೆಳೆಯ ಪೈರುಗಳನ್ನು ತೋರಿಸಿ, ಬರದ ತೀವ್ರತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.  ಇಲ್ಲಿಗೆ ಸಮೀಪದ ವಿನಯ್ ಅವರ ಮೆಕ್ಕೆಜೋಳ ಹೊಲಕ್ಕೆ ಭೇಟಿ ನೀಡಿದ ತಂಡವು ಮಳೆಯ ಕೊರತೆಯಿಂದ ಒಣಗಿಹೋಗುತ್ತಿರುವ ಮೆಕ್ಕೆಜೋಳ ಪೈರಿನ ವೀಕ್ಷಣೆ ಮಾಡಿತು.

ರೈತ ವಿನಯ್ ತನ್ನ 04 ಎಕರೆಯಲ್ಲಿ ಮೆಕ್ಕೆಜೋಳ  ಹಾಗೂ ತೊಗರಿ ಮಿಶ್ರ ಬೆಳೆಯಾಗಿ ಬಿತ್ತನೆ ಮಾಡಿದ್ದು, ಕಾಳು ಕಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟ ಕಾರಣ ಮೆಕ್ಕೆಜೋಳ ಹಾಳಾಗಿರುವುದನ್ನು ಪರಿಶೀಲಿಸಿತು, ರೈತ ತನ್ನ ಬೆಳೆ ಹಾಳಾಗಿರುವ ಬಗ್ಗೆ ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡರು, ಬಳಿಕ ತಂಡವು ಬೀರಾವರ ಗ್ರಾಮಕ್ಕೆ ಭೇಟಿ ನೀಡಿ ಕೃಷ್ಣಪ್ಪ ಹಾಗೂ ಹರೀಶ್ ಬಾಬು ಅವರ ರಾಗಿ ಹೊಲಕ್ಕೆ ಭೇಟಿ ನೀಡಿತು,  ಇಲ್ಲಿ 04 ಎಕರೆಯಲ್ಲಿ ರಾಗಿ, ಮೆಕ್ಕೆಜೋಳ ಬೆಳೆಯನ್ನು ಕಳೆದ ಆಗಸ್ಟ್ ತಿಂಗಳಿನಲ್ಲಿ ಬಿತ್ತಿದ್ದರು, ಮಳೆ ಇಲ್ಲದೆ ತೇವಾಂಶ ಕೊರತೆ ಉಂಟಾಗಿ, ರಾಗಿ ನೆಲಕಚ್ಚಿದೆ.  ಇದೇ ಗ್ರಾಮದ ಶಶಾಂಕ್ ರಾಯ್ ಅವರ ರಾಗಿ ಹೊಲಕ್ಕೂ ಕೂಡ ಭೇಟಿ ನೀಡಿದ ತಂಡ, ಇಲ್ಲಿ ಕೂಡ ರಾಗಿ ಬೆಳೆ ಕಾಳುಕಟ್ಟದೆ ಹಾಳಾಗಿರುವುದನ್ನು ಗಮನಿಸಿತು, ಅಲ್ಲದೆ ರೈತರಿಂದ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡಿತು.

ರೈತರು ಮುಂಗಾರು ಮಳೆ ಇಲ್ಲದೆ ಬೆಳೆ ಹಾನಿಯಾದ ಬಗ್ಗೆ ಹಾಗೂ ಉಂಟಾದ ನಷ್ಟದ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡು, ಬೆಳೆ ನಷ್ಟ ಪರಿಹಾರಕ್ಕೆ ಮನವಿ ಮಾಡಿದರು.  ಬಳಿಕ ಕೇಂದ್ರ ತಂಡವು ಗೋನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಸಲಹಟ್ಟಿ ಗ್ರಾಮದ ರವಿ ನಾರಾಯಣ್ ಅವರ ಹೊಲಕ್ಕೆ ಭೇಟಿ ನೀಡಿತು.  ರೈತ ತನ್ನ 04 ಎಕರೆಯಲ್ಲಿ ಮೆಕ್ಕೆಜೋಳ ಬೆಳೆ ಬಿತ್ತಿದ್ದು, ಬೆಳೆಯ ಪೈರು ಹಸಿರಾಗಿದ್ದರೂ, ಕಾಳು ಕಟ್ಟದೆ ಕೇವಲ ದಂಟು ಇರುವುದನ್ನು ತಂಡವು ವೀಕ್ಷಿಸಿತು.  ರೈತ ರವಿ ನಾರಾಯಣ್ ಮಾಹಿತಿ ನೀಡಿ, ಉತ್ತಮ ಮಳೆಯ ನಿರೀಕ್ಷೆಯಲ್ಲಿ ತನ್ನ 04 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಮಳೆ ಕೈಕೊಟ್ಟ ಕಾರಣ ಬೆಳೆ ಹಾಳಾಗಿದೆ, ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೃಷಿ ಚಟುವಟಿಕೆಗಾಗಿ ಸುಮಾರು 15 ರಿಂದ 20 ಸಾವಿರ ರೂ. ಖರ್ಚಾಗಿದೆ, ಉತ್ತಮ ಮಳೆಯಾಗಿದ್ದರೆ, ಎಕರೆಗೆ ಕನಿಷ್ಟ 25 ರಿಂದ 30 ಕ್ವಿಂಟಾಲ್ ಮೆಕ್ಕೆಜೋಳ ಬೆಳೆ ಪಡೆಯುತ್ತಿದ್ದೆ, ಆದರೆ ಮಳೆ ಇಲ್ಲದ ಕಾರಣ ತೀವ್ರ ನಷ್ಟ ಉಂಟಾಗಿದೆ.  ಮೇವಿಗೂ ಕೂಡ ಈ ಬೆಳೆ ಬಾರದಂತಾಗಿದೆ, ಮಳೆ ಬಾರದ ಕಾರಣ ಕಳೆ ಕೂಡ ನಿರ್ವಹಣೆ ಮಾಡಲು ಆಗಲಿಲ್ಲ. ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ನೀಡುವ ಪರಿಹಾರ ಮೊತ್ತವು ಅತ್ಯಲ್ಪವಾಗಿದ್ದು, ಕನಿಷ್ಟ ಬೀಜ, ಗೊಬ್ಬರ, ಕೂಲಿಯ ಖರ್ಚಾದರೂ ಸರಿದೂಗುವಂತೆ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಿದರು.

ಬೆಳೆ ವೀಕ್ಷಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಬರ ಅಧ್ಯಯನ ಮೂರನೇ ತಂಡದ ನೇತೃತ್ವವಹಿಸಿರುವ ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್, ಈಗಾಗಲೇ ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ಬರ ಅಧ್ಯಯನ ಕಾರ್ಯಕೈಗೊಂಡು, ಶನಿವಾರ ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಅಧ್ಯಯನ ಮಾಡಲಾಗುತ್ತಿದೆ.

ಜಿಲ್ಲೆಯ ಮೆಕ್ಕೆಜೋಳ, ರಾಗಿ, ಶೇಂಗಾ, ತೊಗರಿ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ವೀಕ್ಷಣೆ ಮಾಡಲಾಗಿದ್ದು, ಮಳೆಯ ಕೊರತೆಯಿಂದಾಗಿ ಇಲ್ಲಿನ ಬೆಳೆಗಳ ಸ್ಥಿತಿ ಉತ್ತಮವಾಗಿಲ್ಲದಿರುವುದು ಕಂಡುಬಂದಿದೆ.  ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ರೈತರೊಂದಿಗೆ ಸಂವಾದ ನಡೆಸಿ, ಮಾಹಿತಿ ಪಡೆಯಲಾಗಿದೆ. ಇದರ ಜೊತೆಗೆ ಜಿಲ್ಲಾಡಳಿತವು ಸಹ ಬರದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲೆಯ ಬರ ಅಧ್ಯಯನ ವರದಿಯನ್ನು ರಾಜ್ಯದ ಬರ ಅಧ್ಯಯನ ತಂಡದ ನೇತೃತ್ವ ವಹಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರಿಗೆ ಸಲ್ಲಿಸಲಾಗುವುದು, ಬಳಿಕ ರಾಜ್ಯದ ಸಂಗ್ರಹಿತ ಕ್ರೋಢೀಕೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರೈತರ ಜಮೀನುಗಳಿಗೆ ಭೇಟಿ ನೀಡುವುದಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು. ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಸಂಪೂರ್ಣ ಅಂಕಿ ಅಂಶ ಸಹಿತ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿ.ಪಂ. ಸಿಇಒ ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಬಾಬುರತ್ನ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ತಹಶೀಲ್ದಾರ್ ಡಾ.ನಾಗವೇಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ರೈತರು ಇದ್ದರು.

ರೈತ ಈಶಣ್ಣ :  ಚಿತ್ರದುರ್ಗ ತಾಲ್ಲೂಕಿನ ವಿವಿಧೆಡೆ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಈ ಬಾರಿ ಮಳೆಯ ಕೊರತೆಯಿಂದಾಗಿ ಬಿತ್ತನೆ ತಡವಾಯಿತು. ಬಿತ್ತನೆ ನಂತರವೂ ಮಳೆ ಬರಲಿಲ್ಲ. ಇದರಿಂದ ಬೆಳೆ ಕೈ ಸೇರುತ್ತಿಲ್ಲ. ಬೆಳೆ ನಷ್ಟದಿಂದಾಗಿ ರೈತರು ಕಂಗಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಎಕೆರೆಗೆ ಕನಿಷ್ಟ ರೂ.15 ರಿಂದ ರೂ.20 ಸಾವಿರ ಪರಿಹಾರ ನೀಡಬೇಕು, ಮೆಕ್ಕೆಜೋಳ ಸಂಪೂರ್ಣ ಹಾಳಾಗಿದ್ದು, ಜಾನುವಾರುಗಳ ಮೇವಿಗೂ ಯೋಗ್ಯವಿಲ್ಲದಂತಾಗಿದೆ. ಮುಂಗಾರು ಮಳೆ ಅಭಾವದಿಂದ ಜನ-ಜಾನುವಾರುಗಳ ಕುಡಿಯುವ ನೀರಿಗೂ ಬರವಿದೆ ಎಂದು ಸಾಸಲಹಟ್ಟಿ ಗ್ರಾಮ ಈಶಣ್ಣ ಮನವಿ ಮಾಡಿದರು.

ರೈತ ರವಿ ನಾರಾಯಣ್ : ಉತ್ತಮ ಮಳೆಯ ನಿರೀಕ್ಷೆಯಲ್ಲಿ ನಾಲ್ಕು ಎಕರೆಯಲ್ಲಿ ಮೆಕ್ಕೆಜೋಳ ಹಾಕಿದ್ದೆ, ಬೀಜ, ಗೊಬ್ಬರ ಮತ್ತಿತರ ಕೃಷಿ ಕಾರ್ಯಕ್ಕೆ ಎಕರೆಗೆ ಕನಿಷ್ಟ 15 ಸಾವಿರ ರೂ. ಖರ್ಚು ಮಾಡಿದ್ದೇನೆ, ಮಳೆ ಕೈಕೊಟ್ಟಿದ್ದರಿಂದ ಎಡೆಕುಂಟೆ ಕೂಡ ಹೊಡೆಯಲಿಲ್ಲ, ಕಳೆ ಬೆಳೆದಿರುವುದನ್ನು ಕೂಡ ತೆಗೆಸಲು ಆಗಿಲ್ಲ, ಮಳೆ ಇಲ್ಲದ ಕಾರಣ, ಇದೀಗ ಮೆಕ್ಕೆಜೋಳ ಬೆಳೆಯಲ್ಲಿ ಕೇವಲ ದಂಟು ನಿಂತಿದ್ದು, ಕನಿಷ್ಟ ಮೇವಿಗೂ ಕೂಡ ಇದು ಉಪಯೋಗಕ್ಕೆ ಬಾರದಂತಾಗಿದೆ,  ಬೆಳೆ ಪರಿಹಾರ ಮೊತ್ತವನ್ನು ಹೆಚ್ಚಿಸುವ ಮೂಲಕ ಸರ್ಕಾರ ರೈತರ ಹಿತ ಕಾಯಬೇಕು ಎಂದು ಮನವಿ ಮಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನು ಗೆದ್ದಂಗೆ: ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಹೆಚ್ಚು ಶಕ್ತಿ ಬರುತ್ತದೆ: ದಾವಣಗೆರೆಯಲ್ಲಿ  ಸಿ.ಎಂ. ಸಿದ್ದರಾಮಯ್ಯ ಹೇಳಿಕೆ

ದಾವಣಗೆರೆ ಮೇ 4: ನನ್ನ ಮತ್ತು ಕನಕಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ತಿರಸ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಇಲ್ಲಿ ನಡೆದ

ಬೆಂಗಳೂರಿನಲ್ಲಿ 3 ದಿನ ಸಾಧಾರಣ ಮಳೆ‌: ಉಳಿದಂತೆ ಎಲ್ಲೆಲ್ಲಿ ಎಷ್ಟು ಮಳೆ ಸಾಧ್ಯತೆ..?

ಬೆಂಗಳೂರು: ಬಿಸಿಬಿಸಿ ಎನ್ನುತ್ತಿದ್ದ ಬೆಂಗಳೂರು ಮಂದಿಗೆ ನಿನ್ನೆ ವರುಣರಾಯ ತಂಪೆರೆದಿದ್ದ. ಮಧ್ಯಾಹ್ನವೇ‌ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕತ್ತಲು ಕವಿದಿತ್ತು. 3 ಗಂಟೆಯ ವೇಳೆಗೆ ಎಲ್ಲೆಲ್ಲೂ ಜೋರು ಮಳೆಯಾಗಿತ್ತು. ಮಳೆ ಕಂಡು ಬೆಂಗಳೂರು ಮಂದಿ

error: Content is protected !!