ಬೆಂಗಳೂರು: ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾಗೆ ಡ್ರೋನ್ ಬೇಕೆಂದು ಸಂತೋಷ್ ಎಂಬಾತರನ್ನು ಕರೆಸಲಾಗಿತ್ತು. ಚಿತ್ರದುರ್ಗದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಆದರೆ ಶಾಟ್ ಒಂದನ್ನು ತೆಗೆಯುವಾಗ ಡ್ರೋನ್ ಹಾಳಾಗಿದೆ. ಅದರ ಪರಿಹಾರ ಕೇಳಿದ್ರೆ ನೋ ರೆಸ್ಪಾನ್ಸ್. ನಷ್ಟಕ್ಕೆ ಹೆದರಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಪ್ರಾಣಪಾಯದಿಂದ ಬಚಾವ್ ಆಗಿ ಬಂದಿದ್ದಾರೆ. ಈ ಸಂಬಂಧ ಈಗಾಗಲೇ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಸಂತೋಷ್ ಮಾತನಾಡಿದ್ದು, ಎರಡು ದಿನ ಶೂಟ್ ಇದೆ ಅಂತ ನನ್ನನ್ನ ಕರೆಸಿದ್ದರು. 24 ನೇ ತಾರೀಖು ಬೆಳಗ್ಗೆ 9 ಗಂಟೆಗೆ ಡ್ರೋನ್ ಕ್ರ್ಯಾಶ್ ಆಯ್ತು. ನಾನು ಮೊದಲೇ ಹೇಳಿದ್ದೆ. ವಿಂಎ್ ಫ್ಯಾನ್ ಗೆ ತಗುಲಿದರೆ ಹಾಳಾಗುತ್ತೆ ಅಂತ. ಆ ಶಾಟ್ಸ್ ತೆಗೆಯೋದಕ್ಕೆ ಆಗಲ್ಲ ಅಂತ ಕ್ಯಾಮೆರಾಮೆನ್ ಹಾಗೂ ಡೈರೆಕ್ಟರ್ ಬಳಿ ಹೇಳಿದ್ದೆ. ಟಚ್ ಆದ್ರೆ ಡ್ರೋನ್ ಪುಡಿ ಪುಡಿ ಆಗುತ್ತೆ ಅಂತ ಹೇಳಿದ್ದೆ. ಆದರೂ ಅವರು ನನ್ನ ಮಾತನ್ನೇ ಕೇಳಲಿಲ್ಲ. ಆ ಶೂಟ್ ಶುರುವಾದ ನಾಲ್ಕೆ ಸೆಕೆಂಡ್ ನಲ್ಲಿ ನನ್ನ ಡ್ರೋನ್ ಪುಡಿ ಪುಡಿ ಆಯ್ತು. ಬೆಟ್ಟದ ಕೆಳಗೆ ಡ್ರೋನ್ ಬಿದ್ದೋಗಿದೆ. ಯಾರನ್ನು ಕೂಡ ಡ್ರೋನ್ ಎತ್ಕೊಂಡು ಬರುವುದಕ್ಕೆ ಕಳುಹಿಸಲಿಲ್ಲ. ನಾನೇ ಹೋದೆ, ಡ್ರೋನ್ ಎತ್ಕೊಂಡು ಬಂದೆ.
ಮ್ಯಾನೇಜರ್ ಬಳಿ ಈ ರೀತಿ ಆಗಿದೆ ಎಂದು ಹೇಳಿದಾಗ ಹೀರೋ ಸಾಹೇಬ್ರ ಬಳಿ ಮಾತಾಡಿ ನೋಡು, ಒಳ್ಳೆಯವರು ಅಂದ್ರು. ನಾನು ಕ್ಯಾರಾವಾನ್ ಗೆ ಹೋಗಿ ಸರ್, ಡ್ರೋನ್ ಈ ಥರ ಆಗಿದೆ. ಪ್ರೊಡಕ್ಷನ್ ಗೆ ಹೇಳಿ ಅಲ್ಪಸ್ವಲ್ಪ ಮಾಡಿಕೊಡುವುದಕ್ಕೆ ಹೇಳಿ ಅಂದೆ. ಅದಕ್ಕವರು ನಮಗೆ ಅದೆಲ್ಲ ಹೇಳಬೇಡಪ್ಪ ಅಂದ್ರು. ಆಮೇಲೆ ಮ್ಯಾನೇಜರ್, ಕ್ಯಾಮಾರಾಮೆನ್ ಬಳಿ ಮಾತಾಡಿದರು ಪ್ರಯೋಜನವೇ ಆಗಲ್ಲ. 24 ಲಕ್ಷ ರೂಪಾಯಿ ನಷ್ಟ ನಂಗೆ. ಯಾವ ಥರದ ಅಗ್ರಿಮೆಂಟ್ ಆಗಿಲ್ಲ. ಪ್ರೊಡಕ್ಷನ್ ಮೇಲೆ ನಂಬಿಕೆ ಇಟ್ಟು ಹೋಗಿದ್ದೆವು. ಹೀಗಾಗಿ ಮಾನವೀಯತೆಯ ದೃಷ್ಟಿಯಿಂದ ಕೇಳ್ತಾ ಇದ್ದೀನಿ ಎಂದಿದ್ದಾರೆ.