ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 25 : ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಶುಕ್ರವಾರ ಕಾರ್ಮಿಕ ಅಧಿಕಾರಿ ಮೂಲಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
2017-18 ನೇ ಸಾಲಿನಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ ಮೂರು ಸಾವಿರ ರೂ.ಗಳಿಂದ ಐದು ಸಾವಿರ ರೂ.ಗಳ ಸಹಾಯ ಧನ ನೀಡಲಾಗುತ್ತಿತ್ತು. ಆರರಿಂದ ಹತ್ತನೆ ತರಗತಿ ಮಕ್ಕಳಿಗೆ ಹದಿನೈದು ಸಾವಿರ ರೂ.ಗಳ ಸಹಾಯ ಧನ ನೀಡಬೇಕು. ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸೆಮಿಸ್ಟರ್‍ನಂತೆ 12 ಸಾವಿರ ರೂ. ಸಹಾಯ ಧನ ಮಂಜೂರು ಮಾಡಬೇಕು. ಪದವಿ ವಿದ್ಯಾರ್ಥಿಗಳಿಗೆ ಐವತ್ತು ಸಾವಿರ ಹಾಗೂ ಸ್ನಾತಕೋತ್ತರ, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅರವತ್ತು ಸಾವಿರ ರೂ.ಗಳ ಸಹಾಯ ಧನ ಕೊಡಬೇಕೆಂದು ಕಟ್ಟಡ ಕಾರ್ಮಿಕರು ಒತ್ತಾಯಿಸಿದರು.
ನೊಂದಾಯಿತ ಕಟ್ಟಡ ಕಾರ್ಮಿಕ ಮಹಿಳೆಗೆ ನೀಡುತ್ತಿರುವ ಹೆರಿಗೆ ಭತ್ಯೆ ಅರವತ್ತು ಸಾವಿರ ರೂ.ಗಳ ಬದಲಿಗೆ ತಾಯಿ ಮಗುವಿನ ಪೋಷಣೆಗಾಗಿ ಆರು ತಿಂಗಳುಗಳ ಕಾಲ ಒಂದು ಲಕ್ಷ ರೂ.ಗಳ ಹೆರಿಗೆ ಭತ್ಯೆ ನೀಡಬೇಕು. ನೊಂದಾಯಿತ ಕಟ್ಟಡ ಕಾರ್ಮಿಕರು ಸಹಜ ಸಾವಿಗೀಡಾದರೆ ಎರಡು ಲಕ್ಷ ರೂ.ಗಳ ಪರಿಹಾರ ಕೊಡಬೇಕು. ಬಿಲ್ಡಿಂಗ್ ಕುಸಿತಕ್ಕೆ ಕಟ್ಟಡ ಕಾರ್ಮಿಕ ಮೃತ ಪಟ್ಟರೆ ಅಪಘಾತವೆಂದು ಪರಿಗಣಿಸಿ ಅವಲಂಭಿತ ಕುಟುಂಬಕ್ಕೆ ಹತ್ತು ಲಕ್ಷ ರೂ.ಗಳ ಪರಿಹಾರ ಘೋಷಿಸಬೇಕು. ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಮದುವೆ ಸಹಾಯ ಧನವನ್ನು ಅರವತ್ತೈದು ಸಾವಿರ ರೂ.ಗಳ ಬದಲಿಗೆ ಒಂದು ಲಕ್ಷ ರೂ. ನೀಡಬೇಕು. ಅರವತ್ತು ವರ್ಷ ಪೂರೈಸಿರುವ ನೊಂದಾಯಿತ ಕಟ್ಟಡ ಕಾರ್ಮಿಕ ಪಿಂಚಣಿಗೆ ಅರ್ಹನಾಗಿದ್ದು, ಈಗ ನೀಡುತ್ತಿರುವ ಮೂರು ಸಾವಿರ ರೂ.ಗಳನ್ನು ಐದು ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಹಣವನ್ನು ಅನಗತ್ಯವಾಗಿ ಖರ್ಚು ಮಾಡಬಾರದೆಂದು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕೆಂದು ಪ್ರತಿಭಟನಾನಿರತ ಕಾರ್ಮಿಕರ ಆಗ್ರಹಿಸಿದರು.
ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಸೇಫ್ಟಿ ಕಿಟ್‍ಗಳನ್ನು ವಿತರಿಸಲಾಯಿತು. ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಹೆಚ್.ಹಾಲೇಶಪ್ಪ, ತಾಲ್ಲುಕು ಅಧ್ಯಕ್ಷ ಜಾವೀದ್‍ಬಾಷಾ, ಉಪಾಧ್ಯಕ್ಷ ಮನ್ಸೂರ್‍ಬಾಷಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿದೇವಿ, ಪಿ.ಈರೇಶ್, ಹನುಮಂತಪ್ಪ, ಜಗದೀಶ್, ಎಂ.ರಾಜಣ್ಣ, ಅಂಜಿನಪ್ಪ, ಟಿ.ಅಶೋಕ್, ಎಂ.ಮಲ್ಲಿಕಾರ್ಜುನ, ಸುರಂಗಿ ತಿಪ್ಪೇಸ್ವಾಮಿ, ಪಿ.ರಾಜಣ್ಣ, ಹೆಚ್.ರಮೇಶ್, ಎಂ.ಸುರೇಶ್, ಡಿ.ಲಕ್ಷ್ಮಣ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

















