ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜು. 07 : ಮಠದ ಜಾಗದ ವಿಚಾರಕ್ಕೆ ಹಿರಿಯೂರಿನ ಐಮಂಗಲದ ಬಳಿಯಿರುವ ಹರಳಯ್ಯ ಗುರುಪೀಠದ ಪೀಠಾಧ್ಯಕ್ಷ ಹರಳ್ಳಯ್ಯ ಸ್ವಾಮೀಜಿ ಮೇಲೆ ಶ್ರೀಮಠದಲ್ಲಿ ಗಂಭೀರವಾಗಿ ಹಲ್ಲೆ ಮಾಡಿ ಐಮಂಗಳ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಮಾಡಿರುವುದನ್ನು ಪ್ರತಿಭಟಿಸಿ ಮಂಗಳವಾರ ಮಾದಿಗ ಸಮಾಜದವತಿಯಿಂದ ಪ್ರತಿಭಟನೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕಠಿಣವಾದ ಕ್ರಮವನ್ನು ತೆಗೆದು ಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆಯನ್ನು ನಡೆಸಿದ ಮಾದಿಗ ಸಮುದಾಯ ಹಾಗೂ ಭಕ್ತರು ದಾರಿಯುದ್ದಕ್ಕೂ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಪೋಲಿಸರ ನಿರ್ಲಕ್ಷವನ್ನು ಖಂಡಿಸಲಾಯಿತು, ಇದ್ದಲ್ಲದೆ ಅಂಬೇಡ್ಕರ್ ವೃತ್ತದಲ್ಲಿ ಸ್ವಾಮಿಜಿಯವರ ಮೇಲೆ ಹಲ್ಲೆ ಮಾಡಿದ ಸಿದ್ದೇಶ್ವರ ಹಾಗೂ ಆಕಾಶ, ಶಿವಪ್ರಕಾಶ್ ಎಂಬುವವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಬೆಂಕಿಯನ್ನು ಹಚ್ಚಲಾಯಿತು, ಇದಾದ ನಂತರ ಸ್ವಾಮಿಜಿಯವರ ಮೇಲೆ ಹಲ್ಲೆ ಮಾಡಿ ಚಪ್ಪಲಿ ಕಾಲಿನಿಂದ ಹೊಡೆದಿದ್ದಕ್ಕೆ ಪ್ರತಿಯಾಗಿ ಹರಳಯ್ಯ ಸ್ವಾಮೀಜಿ ಹಾಗೂ ವಿಶ್ವಗುರು ಬಸವಣ್ಣರವರ ಭಾವಚಿತ್ರಕ್ಕೆ ಹಾಲಿನ ಅಭೀಷೇಕವನ್ನು ಮಾಡಲಾಯಿತು.
ಹಿರಿಯೂರು ತಾಲ್ಲೂಕು ಅದಿರಾಳು ಗ್ರಾಮದ ಲಿಂಗಾಯಿತ ಜನಾಂಗಕ್ಕೆ ಸೇರಿದ ಸಿದ್ದೇಶ್ವರ ಮತ್ತು ಆಕಾಶ್, ಶಿವಪ್ರಕಾಶ್ ಮತ್ತು ಇವರ ಕುಟುಂಬದವರು ಆಗಾಗ್ಗೆ ಮಠಕ್ಕೆ ಬಂದು ಜಾತಿನಿಂಧನೆ ಮಾಡಿ, ಜಾಗದ ವಿಚಾರವಾಗಿ ಗಲಾಟೆ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕುತ್ತಾ ಬಂದಿದ್ದಾರೆ ಐಮಂಗಲದಲ್ಲಿರುವ ಶ್ರೀ ಬಸವ ಹರಳಯ್ಯ ಸ್ವಾಮೀಜಿಯವರ ಮಠಕ್ಕೆ ಎರಡು ಬೈಕ್‍ಗಳಲ್ಲಿ ಮೇಲ್ಕಂಡ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿ ಸ್ವಾಮೀಜಿಯವರ ಮೇಲೆ ಜಾತಿನಿಂಧನೆ ಮಾಡಿ, ಹೊಡೆದು ಹಲ್ಲೆ ಮಾಡಿರುತ್ತಾರೆ. ಬಿಡಿಸಲು ಬಂದ ಚಾಲಕ ಭೀಮರಾಜ್ ಇವರಿಗೂ ಸಹ ಹೊಡೆದು ಸ್ವಾಮೀಜಿಯವರಿಗೆ ರಕ್ತಗಾಯಗಳಾಗಿರುತ್ತವೆ. ನಂತರ ಸ್ವಾಮೀಜಿಯವರು ಐಮಂಗಳ ಠಾಣೆಗೆ ಬಂದು ದೂರು ನೀಡಲು ಮುಂದಾದಾಗ ಠಾಣೆಯಲ್ಲಿಯೇ ಸ್ವಾಮೀಜಿಯರ ಮೇಲೆ ಪೊಲೀಸರು ಇದ್ದರೂ ಸಹ ಸ್ವಾಮೀಜಿಗಳ ಮೇಲೆ ಚಪ್ಪಲಿ ಕಾಲಿನಿಂದ ಹೊಡೆದು ಆರೋಪಿಗಳು ಹಲ್ಲೆ ಮಾಡಿ, ಜಾತಿನಿಂಧನೆ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆ. ಸ್ವಾಮೀಜಿಗೆ ಅವಮಾನಿಸಿದ್ದಲ್ಲದೇ ಇಡೀ ಬಸವ ಕುಲ ಹಾಗೂ ಮಾದಿಗ ಸಮಾಜಕ್ಕೆ ಧಕ್ಕೆವುಂಟು ಮಾಡಿರುತ್ತಾರೆ. ಈ ಹೀನ ಕೃತ ವೆಸಗಿದ ಆರೋಪಿಗಳನ್ನು ಕೂಡಲೇ ರೌಡಿಪಟ್ಟಕ್ಕೇರಿಸಿ ಗಡಿಪಾರು ಮಾಡಿ, ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಈ ಆರೋಪಿಗಳಿಗೆ ಯಾವುದೇ ಜಾಮೀನು ನೀಡದಂತೆ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ, ಗೃಹ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕೂಡಲೇ ಕ್ರಮ ವಹಿಸಲು ಒತ್ತಾಯಿಸಲಾಯಿತು.
ಸ್ವಾಮೀಜಿಯವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಠದಲ್ಲಿ ಬಸವಣ್ಣನ ಮೇಲೆ ಆಣೆ ನಿಮ್ಮನ್ನು ಕೊಲೆ ಮಾಡುತ್ತೇವೆ ಎಂದು ಸಿದ್ದೇಶ್ ಎನ್ನುವ ವ್ಯಕ್ತಿ ಶಪಥ ಮಾಡಿರುತ್ತಾರೆ. ಹಾಗೂ ಪೊಲೀಸ್ ಠಾಣೆಯಲ್ಲಿ ಸಿದ್ದೇಶ್ ಇವರ ತಮ್ಮ ಆಕಾಶ್ ಸ್ವಾಮೀಜಿಯವರನ್ನು ಚಪ್ಪಲಿಯಿಂದ ಹೊಡೆದು ಪೊಲೀಸರ ಎದುರೆ ಕೊಲೆ ಬೆದರಿಕೆ ಹಾಕಿರುತ್ತಾನೆ. ಇದರಿಂದ ಮಾದಿಗೆ ಸಮಾಜಕ್ಕೆ ತುಂಬಾ ನೋವುಂಟಾಗಿರುತ್ತದೆ. ಇವರಿಂದ ಸ್ವಾಮೀಜಿಯವರಿಗೆ ಪ್ರಾಣಭಯವಿರುತ್ತದೆ. ಮುಂದೇನಾದರೂ ಸ್ವಾಮೀಜಿಯವರಿಗೆ ಏನಾದರೂ ಅನಾಹುತ ಆದಲ್ಲಿ ಸ್ಥಳೀಯ ಪೊಲೀಸ್ ಠಾಣೆಯವರು ಮತ್ತು ಸರ್ಕಾರವೇ ಹೊಣೆಯಾಗಿರುತ್ತದೆ. ಒಬ್ಬ ಹಿಂದೂ ಸ್ವಾಮೀಜಿಗೆ ಈ ರೀತಿ ಅಪಮಾನ ಮಾಡಿದ್ದು ನೋಡಿದರೆ ಯಾರದೋ ದೊಡ್ಡ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಒಬ್ಬ ಸ್ವಾಮೀಜಿ ರಕ್ಷಣೆ ಇಲ್ಲದಂತಾಗಿದೆ. ಸಾಮಾನ್ಯ ದಲಿತ ಮಾದಿಗ ಜನಾಂಗದ ಪರಿಸ್ಥಿತಿ ಏನಾಗುತ್ತದೆ ಎಂಬುದು ಭಯದ ವಾತಾವರಣ ಉಂಟಾಗಿರುತ್ತದೆ.
ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನ ಮಠದ ಶ್ರೀ ಷಡಾಕ್ಷರಿ ಮುನಿ ಸ್ವಾಮೀಜಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆ ಶ್ರೀಗಳ ಮಠದ ಜಾಗದ ಬಗ್ಗೆ ಕೂಡಲೇ ಬಗೆಹರಿಸಬೇಕು, ಸ್ವಾಮೀಜಿಯವರಿಗೆ ಅಂಗರಕ್ಷಕರನ್ನು ಕೂಡಲೇ ಒದಗಿಸಬೇಕು, ಮಠಕ್ಕೆ ಹೆಚ್ಚಿನ ಭದ್ರತೆ ಒದಗಿಸಬೇಕು, ಪೊಲೀಸ್ ಠಾಣೆಯಲ್ಲಿ ಪೊಲೀಸರ ಎದುರು ಹಲ್ಲೆ ಮಾಡಿ ಜಾತಿನಿಂಧನೆ ಮಾಡಿದ್ದು, ಸಿ.ಸಿ. ಟಿವಿ ಪುಟೇಜ್ ಪರಿಶೀಲಿಸಿ, ಪೊಲೀಸರು ಸ್ವಾಮೀಜಿಯವರಿಗೆ ರಕ್ಷಣೆ ನೀಡದೇ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು, ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಕೂಡಲೇ ವಿಶೇಷ ಪ್ರಕರಣವಾಗಿ ಪರಿಗಣಿಸಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಲೋಕ ಅದಾಲತ್‍ನಲ್ಲಿ ತುರ್ತಾಗಿ ಬಗೆಹರಿಸಿಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಈ ಪ್ರತಿಭಟನೆಯ ನೇತೃತ್ವವನ್ನು ಕೆ.ಟಿ.ಶಿವಕುಮಾರ್ ವಹಿಸಿದ್ದರು, ಇದರಲ್ಲಿ ಡಾ.ಪ್ರಕಾಶ್ ಬೀರಾವರ, ಶ್ರೀನಿವಾಸ್, ವಿಶ್ವ ನಾರಾಯಣ ಮೂರ್ತಿ, ರಂಗಸ್ವಾಮಿ ಕಲ್ಲಹಟ್ಟಿ ಪರಶುರಾಮ್ ಜಯ್ಯಪ್ಪ ಬ್ಯಾಲೆಹಾಳ್ ಸೇರಿದಂತೆ ಇತರರು ಭಾಗವಹಿಸಿದ್ದರು.

















