ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 22 : ದ್ವಿತೀಯ ಬಿ.ಎ.ವಿದ್ಯಾರ್ಥಿನಿ ವರ್ಷಿತಾಳನ್ನು ಬರ್ಬರವಾಗಿ ಹತ್ಯೆಗೈದಿರುವವರಿಗೆ ಕ್ರೂರ ಶಿಕ್ಷೆ ವಿಧಿಸುವಂತೆ ಯುವ ಕರ್ನಾಟಕ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ವರ್ಷಿತಾಳ ಮೇಲೆ ಅತ್ಯಾಚಾರವೆಸಗಿ ಸುಟ್ಟುಹಾಕಿರುವುದು ಇಡಿ ನಾಗರೀಕ ಸಮಾಜ ತಲೆತಗ್ಗಿಸುವಂತದ್ದು, ಈ ಕೃತ್ಯದ ಹಿಂದೆ ಯಾರ್ಯಾರ ಕೈವಾಡವಿದೆ ಎನ್ನುವುದನ್ನು ಸಮಗ್ರ ತನಿಖೆ ಮೂಲಕ ಬಯಲಿಗೆಳೆಯುವ ಕೆಲಸವನ್ನು ಪೊಲೀಸರು ಮಾಡಬೇಕಿದೆ. ಹತ್ಯೆಗೀಡಾಗಿರುವ ವರ್ಷಿತಾಳ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ನಿರ್ಲಕ್ಷೆ ಮಾಡಬಾರದು. ಚಿತ್ರದುರ್ಗದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದೆಂದರೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್‍ನಾಯ್ಕ, ಉಪಾಧ್ಯಕ್ಷ ಮಂಜಣ್ಣ, ರೈತ ಸಂಘದ ಅಧ್ಯಕ್ಷ ಸಿದ್ದೇಶ್, ಕಾರ್ಯದರ್ಶಿ ಓಬಣ್ಣ, ತಾಲ್ಲೂಕು ಅಧ್ಯಕ್ಷ ಸಚಿನ್, ಯಶವಂತ್, ನಾಗರಾಜ್, ರಘುನಾಯ್ಕ, ಸತೀಶ್, ಗಿರೀಶ್, ಎಸ್.ನಾಗರಾಜ, ರವಿಶಂಕರ್, ಶಿವಶಂಕರ್, ಪ್ರಕಾಶ್, ನಿಂಗಪ್ಪ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.















