ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 06 : ಜಿಲ್ಲೆಯ ಐಮಂಗಲ ಹೋಬಳಿಯ ಮಾರೇನಹಳ್ಳಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಅಳಿಯ ರಾಮರಾಯರ ಕಾಲದ ಅಪರೂಪದ ಶಾಸನವೊಂದು ಪತ್ತೆಯಾಗಿದೆ. ಗ್ರಾಮದ ಮಾರಣ್ಣಯುಧೀಷ್ಟರಪ್ಪ ಎಂಬುವವರ ಜಮೀನಿನಲ್ಲಿರುವ ಈ ಶಾಸನದ ಕುರಿತು ಶಿಕ್ಷಕ ತಿಪ್ಪೇಸ್ವಾಮಿ ನೀಡಿದ ಸುಳಿವಿನ ಮೇರೆಗೆ, ಇತಿಹಾಸ ಸಂಶೋಧಕ ಹಾಗೂ ಉಪನ್ಯಾಸಕ ಡಾ. ಮಹೇಶ್ ಕುಂಚಿಗನಾಳು ಮತ್ತು ವಿಜಯ್ಕುಮಾರ್ ಸ್ಥಳಕ್ಕೆ ತೆರಳಿ ಕ್ಷೇತ್ರಕಾರ್ಯ ನಡೆಸಿ ಪರಿಶೀಲಿಸಿದ್ದಾರೆ.
ಪ್ರಾಥಮಿಕ ಅಧ್ಯಯನದ ಪ್ರಕಾರ ಈ ಶಾಸನವು 16ನೇ ಶತಮಾನದ್ದಾಗಿದ್ದು, ಕ್ರಿ.ಶ. 1542 ರಿಂದ 1565ರವರೆಗೆ ವಿಜಯನಗರವನ್ನು ಆಳಿದ ರಾಮರಾಯರ ಕಾಲಕ್ಕೆ ಸೇರಿದೆ. ಶಾಸನದಲ್ಲಿ ರಾಮರಾಯರ ಕಾರ್ಯಕರ್ತನೊಬ್ಬನ ಉಲ್ಲೇಖವಿದ್ದು, ಮುಂದಿನ ಭಾಗ ಹಾಳಾಗಿದೆ. ಆ ನಾಯಕನು ಹರತಿಯ ಮಲ್ಲಿಕಾರ್ಜುನ ದೇವರಿಗೆ ಮಾರೇನಹಳ್ಳಿ ಗ್ರಾಮವನ್ನು ದತ್ತಿಯಾಗಿ ಬಿಟ್ಟಿರುವ ಅಂಶ ಇದರಲ್ಲಿ ದಾಖಲಾಗಿದೆ. ಹಿಂದಿನ ಕಾಲದಲ್ಲಿ ದೇವಾಲಯಗಳ ಪೂಜೆ, ಪುನಸ್ಕಾರ ಹಾಗೂ ನಿರ್ವಹಣೆಯ ವೆಚ್ಚಕ್ಕಾಗಿ ಆಡಳಿತಗಾರರು ಇಡೀ ಗ್ರಾಮವನ್ನೇ ದಾನವಾಗಿ ನೀಡಿ, ಅದರಿಂದ ಬರುವ ಸಕಲ ತೆರಿಗೆ ಮತ್ತು ಕಂದಾಯವನ್ನು ದೇವಾಲಯದ ಖಾತೆಗೆ ವಹಿಸಿಕೊಡುವ ಸಂಪ್ರದಾಯವಿತ್ತು ಎಂಬುದನ್ನು ಈ ಶಾಸನ ದೃಢಪಡಿಸುತ್ತದೆ.
ಹರತಿಯಲ್ಲಿರುವ ಮಲ್ಲಿಕಾರ್ಜುನ ದೇವಾಲಯದ ಪ್ರಸ್ತಾಪವು ಈಗಾಗಲೇ 17ನೇ ಶತಮಾನದ ಹರತಿಯ ವೀರಭದ್ರ ದೇವಾಲಯದ ಶಾಸನದಲ್ಲೂ ಕಂಡುಬಂದಿದ್ದು, ಪ್ರಸ್ತುತ ಸ್ಥಳೀಯವಾಗಿ ರೇವಣಸಿದ್ದೇಶ್ವರ ದೇವಾಲಯವೆಂದು ಕರೆಯಲಾಗುತ್ತಿರುವ ಪುರಾತನ ಗುಡಿಯೇ ಅಂದಿನ ಮಲ್ಲಿಕಾರ್ಜುನ ದೇವಾಲಯವಾಗಿರಬಹುದು ಎಂದು ಡಾ. ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.
ಐತಿಹಾಸಿಕವಾಗಿ ಈ ಶಾಸನವು ಎರಡು ಪ್ರಮುಖ ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿದೆ. ಚಿತ್ರದುರ್ಗ ಪರಿಸರದಲ್ಲಿ ವಿಜಯನಗರದ ರಾಮರಾಯರ ಕಾಲದ ಶಾಸನಗಳು ಅತ್ಯಂತ ವಿರಳವಾಗಿದ್ದು, ಆ ಅಪರೂಪದ ಸಾಲಿಗೆ ಮಾರೇನಹಳ್ಳಿಯ ಈ ಶಾಸನ ಹೊಸ ಸೇರ್ಪಡೆಯಾಗಿದೆ. ಮತ್ತೊಂದೆಡೆ, ಹರತಿಯ ಪಾಳೆಯಗಾರರ ವಂಶಾವಳಿಯು ಹೊಟ್ಟೆಪ್ಪನಾಯಕರಿಂದ ಆರಂಭವಾಗುತ್ತದೆ ಎಂಬುದು ಇತಿಹಾಸದ ದಾಖಲೆ. ಆದರೆ ಈ ಶಾಸನದಲ್ಲಿ ಅವರಿಗಿಂತಲೂ ಹಿಂದಿನ ನಾಯಕನೊಬ್ಬನ ಉಲ್ಲೇಖವಿದ್ದು, ಆತನೇ ವಿಜಯನಗರ ಪತನದ ನಂತರದ ದಿನಗಳಲ್ಲಿ ಹರತಿ ನಾಯಕರ ಸಂಸ್ಥಾನಕ್ಕೆ ಅಸ್ತಿವಾರ ಹಾಕಿದನೇ ಎಂಬ ನಿಟ್ಟಿನಲ್ಲಿ ಮತ್ತಷ್ಟು ಆಳವಾದ ಸಂಶೋಧನೆ ನಡೆಯಬೇಕಿದೆ.
ಶಾಸನ ಪಾಠ ಓದಿಕೊಟ್ಟ ಶಾಸನ ತಜ್ಞರಾದ ಶಶಿಕುಮಾರನಾಯ್ಕರವರಿಗೆ. ಕ್ಷೇತ್ರಕಾರ್ಯದಲ್ಲಿ ನೆರವಾದ ಶಿಕ್ಷಕರಾದ ತಿಮ್ಮಣ್ಣ, ಸೋಮಶೇಖರ್, ಬಸವರಾಜ್, ಪ್ರಸನ್ನಕುಮಾರ್, ದಂಡಪ್ಪರಿಗೆ ವಂದನೆಗಳನ್ನು ತಿಳಿಸಿದ್ದಾರೆ.
ಮಾಹಿತಿ
ಡಾ.ಮಹೇಶ್ ಕುಂಚಿಗನಾಳು, ಚಿತ್ರದುರ್ಗ, ಮೊ : 9738573758











