ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳಿಗೆ ಆರ್ಥಿಕ ಬಲ ಹಾಗೂ ಉದ್ಯೋಗ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುವ ನಗದು ಬಹುಮಾನವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸಾಧಕರಿಗೆ ಸರ್ಕಾರಿ ಹುದ್ದೆಗಳಲ್ಲಿ ನೇರ ನೇಮಕಾತಿ ಹಾಗೂ ಶೇಕಡ 2ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪರಿಷ್ಕೃತ ನಿಯಮದ ಅನ್ವಯ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದವರಿಗೆ ಈ ಹಿಂದೆ ನೀಡುತ್ತಿದ್ದ ₹35 ಲಕ್ಷದ ಬದಲು ಇನ್ಮುಂದೆ ₹1 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ₹25 ಲಕ್ಷದ ಬದಲು ₹75 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ ₹15 ಲಕ್ಷದ ಬದಲಿಗೆ ₹50 ಲಕ್ಷ ನಗದು ಪುರಸ್ಕಾರ ದೊರೆಯಲಿದೆ. ಈ ಬಾರಿ ಒಟ್ಟು ಎಂಟು ಮಂದಿ ಪದಕ ವಿಜೇತರು ಈ ಬೃಹತ್ ಮೊತ್ತಕ್ಕೆ ಭಾಜನರಾಗಲಿದ್ದಾರೆ. ಇದರೊಂದಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಈ ಎಂಟು ಮಂದಿಗೆ ಹೆಚ್ಚುವರಿಯಾಗಿ ತಲಾ ₹5 ಲಕ್ಷ ಪ್ರೋತ್ಸಾಹಧನವೂ ಸಿಗಲಿದೆ.
ಕೇವಲ ಪದಕ ಗೆದ್ದವರಿಗಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ವೇದಿಕೆಗೆ ಅರ್ಹತೆ ಪಡೆದು ಸ್ಪರ್ಧಿಸಿದ್ದ ಕರ್ನಾಟಕದ 20 ಕ್ರೀಡಾಪಟುಗಳಿಗೂ ಇದೇ ಮೊದಲ ಬಾರಿಗೆ ತಲಾ ₹5 ಲಕ್ಷ ನಗದು ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವುದೇ ಒಂದು ದೊಡ್ಡ ಸಾಧನೆಯಾಗಿದ್ದು, ಎಲ್ಲ ಪ್ರತಿಭೆಗಳಿಗೂ ಸ್ಫೂರ್ತಿ ತುಂಬಲು ಈ ಕ್ರಮ ಕೈಗೊಳ್ಳಲಾಗಿದೆ.
ಉದ್ಯೋಗ ಭದ್ರತೆಯ ದೃಷ್ಟಿಯಿಂದ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ರಾಜ್ಯ ಸರ್ಕಾರದ ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಕಲ್ಪಿಸಲು ತೀರ್ಮಾನಿಸಲಾಗಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಅರ್ಹ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದೆ. ಇದರ ಜೊತೆಗೆ, ರಾಜ್ಯ ಸರ್ಕಾರದ ಎಲ್ಲ ಹಂತದ ಗ್ರೂಪ್-ಎ, ಬಿ, ಸಿ ಮತ್ತು ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಸಾಧಕ ಕ್ರೀಡಾಪಟುಗಳಿಗೆ ಶೇಕಡ 2ರಷ್ಟು ಸಮತಲ ಮೀಸಲಾತಿ ಕಲ್ಪಿಸಿ ಈಗಾಗಲೇ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯದ ಪದಕ ಸಾಧನೆಯನ್ನು ಹೆಚ್ಚಿಸುವ ಉದ್ದೇಶದ ‘ಗುರಿ: ಒಲಿಂಪಿಕ್ಸ್’ ಯೋಜನೆಯಡಿ 2026-27ನೇ ಸಾಲಿಗೆ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕ ಪಾಟೀಲ್ ಹಾಗೂ ಶಿಲ್ಪಾ ಕೆ.ಎಸ್. ಅವರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ವಿಶ್ವದರ್ಜೆಯ ತರಬೇತಿ ಹಾಗೂ ಸಿದ್ಧತೆಗಳಿಗಾಗಿ ಪ್ರಸಕ್ತ ಸಾಲಿನಲ್ಲಿ ತಲಾ ₹10 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಕ್ರೀಡಾಪಟುಗಳು ಆರ್ಥಿಕ ಹಾಗೂ ಉದ್ಯೋಗದ ಚಿಂತೆಯಿಲ್ಲದೆ ಸಂಪೂರ್ಣವಾಗಿ ಆಟದ ಕಡೆಗೆ ಗಮನಹರಿಸಿ ಕರ್ನಾಟಕವನ್ನು ದೇಶದ ಅಗ್ರಗಣ್ಯ ಕ್ರೀಡಾ ರಾಜ್ಯವನ್ನಾಗಿಸಲು ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದು ಡಿಸಿಎಂ ಭರವಸೆ ನೀಡಿದ್ದಾರೆ.










