Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಹಾಗೂ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 06 : ಮೇರಾ ಯುವ ಭಾರತ್, ಶ್ರೀ ಆದರ್ಶ ಯುವಕ ಯುವತಿ ಸಂಘ (ರಿ), ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಸೇವಾ ಪಕವಾಡ ಪಾಕ್ಷಿಕ ಅಭಿಯಾನದ ಅಂಗವಾಗಿ ರಕ್ತದಾನ ಶಿಬಿರ ಮತ್ತು ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾಲೇಜಿನ ಸಿವಿಲ್ ಸೆಮಿನಾರ್ ಹಾಲ್ನಲ್ಲಿ ನಡೆದ ಈ ಕಾರ್ಯಕ್ರಮವನ್ನು ಕ್ಷಯರೋಗ ನಿರ್ಮೂಲನ ಹಾಗೂ ರಕ್ತ ಸುರಕ್ಷತಾ ಅನುಷ್ಠಾನ ಅಧಿಕಾರಿ ಡಾ. ತುಳಸಿ ರಂಗನಾಥ್ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಕ್ತದಾನವು ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ಯುವಜನರು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜದ ಆರೋಗ್ಯಕ್ಕೆ ದೊಡ್ಡ ಕೊಡುಗೆ ನೀಡಬೇಕು ಎಂದರು. ಅಪಘಾತ, ಶಸ್ತ್ರಚಿಕಿತ್ಸೆ ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ಒಂದು ಯೂನಿಟ್ ರಕ್ತವು ಸಂಜೀವಿನಿಯಂತೆ ಜೀವ ಉಳಿಸಲು ನೆರವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಸ್ವಚ್ಛತೆಯ ಮಹತ್ವದ ಕುರಿತು ಮಾತನಾಡಿದ ಡಾ. ತುಳಸಿ ರಂಗನಾಥ್, ಉತ್ತಮ ಆರೋಗ್ಯಕ್ಕೆ ಸ್ವಚ್ಛತೆಯೇ ಮೂಲಾಧಾರವಾಗಿದೆ. ಊಟಕ್ಕೂ ಮುನ್ನ ಹಾಗೂ ಶೌಚಾಲಯ ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಮನೆ, ಶಾಲೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿಟ್ಟುಕೊಳ್ಳುವುದರ ಜೊತೆಗೆ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಡ್ಡಾಯವಾಗಿ ಕಸದ ಬುಟ್ಟಿಗೆ ಹಾಕುವ ಅಭ್ಯಾಸ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ “ರಕ್ತದಾನ ಮಾಡೋಣ, ಸ್ವಚ್ಛತೆ ಕಾಪಾಡೋಣ, ಆರೋಗ್ಯಕರ ಸಮಾಜ ನಿರ್ಮಿಸೋಣ” ಎಂಬ ಘೋಷವಾಕ್ಯವನ್ನು ಬೋಧಿಸಲಾಯಿತು.

ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡು ಒಟ್ಟು 35 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶ್ರೀನಿವಾಸ್ ಮಳಲಿ, ಡ್ಯಾಪ್ಕೋ ಅಶೋಕ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಈ. ನಿರಂಜನ್, ಯುವ ರೆಡ್ ಕ್ರಾಸ್ ಸಂಯೋಜಕ ನೀಲಕಂಠಪ್ಪ ಟಿ., ಕಚೇರಿ ಅಧೀಕ್ಷಕಿ ಶ್ರೀಮತಿ ಪಲ್ಲವಿ ಹಾಗೂ ಬಸವೇಶ್ವರ ರಕ್ತ ನಿಧಿ ಕೇಂದ್ರದ ಪವನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now