ದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಸಾರ್ವಜನಿಕರಿಗೆ ಆಧಾರ್ ಸಂಬಂಧಿತ ಸೇವೆಗಳನ್ನು ಇನ್ನಷ್ಟು ಸರಳ ಹಾಗೂ ತ್ವರಿತವಾಗಿ ತಲುಪಿಸುವ ಉದ್ದೇಶದಿಂದ ತನ್ನ ಅಧಿಕೃತ ಪೋರ್ಟಲ್ ಅನ್ನು ಸಂಪೂರ್ಣವಾಗಿ ನವೀಕರಿಸಿದೆ. ಸಾಮಾನ್ಯ ನಾಗರಿಕರೂ ಸಹ ಸುಲಭವಾಗಿ ಬಳಸುವಂತೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೊಸ ಸೌಲಭ್ಯಗಳೊಂದಿಗೆ ವೆಬ್‌ಸೈಟ್‌ಗೆ ಮೇಕ್ ಓವರ್ ನೀಡಲಾಗಿದೆ.
ಬಳಕೆದಾರ ಸ್ನೇಹಿ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳು
ನವೀಕೃತ ಪೋರ್ಟಲ್ ಅನ್ನು ಸಂಪೂರ್ಣ ಬಳಕೆದಾರ ಸ್ನೇಹಿಯಾಗಿ ರೂಪಿಸಲಾಗಿದೆ. ಇದರಲ್ಲಿ ಸ್ಕ್ರೀನ್ ರೀಡರ್ ಆಯ್ಕೆ, ಫಾಂಟ್ ಗಾತ್ರ ಹೊಂದಾಣಿಕೆ, ಬಣ್ಣಗಳ ಸ್ಪಷ್ಟತೆ ಮತ್ತು ಕೀಬೋರ್ಡ್ ಮೂಲಕ ಸುಲಭ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸದ್ಯ ಈ ವೆಬ್‌ಸೈಟ್ 13 ಭಾಷೆಗಳಲ್ಲಿ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಇದನ್ನು 23 ಭಾಷೆಗಳಿಗೆ ವಿಸ್ತರಿಸಲು ಪ್ರಾಧಿಕಾರ ಸಿದ್ಧತೆ ನಡೆಸಿದೆ. ಜೊತೆಗೆ ಹೊಸದಾಗಿ ಕೆರಿಯರ್ ಪೋರ್ಟಲ್ ಅಳವಡಿಸಲಾಗಿದ್ದು, ಉದ್ಯೋಗ ಆಕಾಂಕ್ಷಿಗಳಿಗೆ ಮಾಹಿತಿ ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಪಾರದರ್ಶಕ ವ್ಯವಸ್ಥೆ ಕಲ್ಪಿಸಲಾಗಿದೆ.
ಕಚೇರಿಗೆ ಅಲೆಯುವ ಅಗತ್ಯವಿಲ್ಲದೆ ಆನ್‌ಲೈನ್ ಸೇವೆ
ಆಧಾರ್ ಸೇವಾ ಕೇಂದ್ರಗಳಿಗೆ ನೇರವಾಗಿ ತೆರಳುವ ತೊಂದರೆ ತಪ್ಪಿಸಲು ಆನ್‌ಲೈನ್ ನವೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಲಾಗಿದೆ. ಬಳಕೆದಾರರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ವಿಳಾಸದಂತಹ ವಿವರಗಳನ್ನು ಆನ್‌ಲೈನ್ ಮೂಲಕವೇ ಸುಲಭವಾಗಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಯಾವುದೇ ಗೊಂದಲ ಅಥವಾ ತಾಂತ್ರಿಕ ಸಮಸ್ಯೆಗಳಿದ್ದರೆ ನೆರವು ಪಡೆಯಲು ಗ್ರಾಹಕ ಬೆಂಬಲ ವಿಭಾಗವನ್ನು ಸಹ ಬಲಪಡಿಸಲಾಗಿದೆ. ಇದಲ್ಲದೆ, ಪ್ರಾದೇಶಿಕ ಕಚೇರಿಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಟೋಕನ್ ಪದ್ಧತಿಯನ್ನು ಪರಿಚಯಿಸಲಾಗಿದೆ.
ರೇಷನ್ ಪಡೆಯಲು ಫೇಸ್ ಅಥೆಂಟಿಕೇಶನ್ ವ್ಯವಸ್ಥೆ

ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ಯುಐಡಿಎಐ ಮುಖ ಗುರುತಿಸುವಿಕೆ (ಫೇಸ್ ಅಥೆಂಟಿಕೇಶನ್) ವಿಧಾನವನ್ನು ತಂದಿದೆ. ಇದುವರೆಗೆ ಬೆರಳಚ್ಚು ಸರಿಯಾಗಿ ಹೊಂದಾಣಿಕೆಯಾಗದೆ ಫಲಾನುಭವಿಗಳು ಪಡಿತರ ಪಡೆಯಲು ಪರದಾಡುವ ಪರಿಸ್ಥಿತಿ ಇತ್ತು. ಇನ್ಮುಂದೆ ಫಲಾನುಭವಿಗಳು ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಸುಲಭವಾಗಿ ಆಧಾರ್ ದೃಢೀಕರಣ ಪೂರ್ಣಗೊಳಿಸಿ ಪಡಿತರ ಪಡೆಯಬಹುದಾಗಿದೆ. ರಾಜ್ಯ ಸರ್ಕಾರಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಈ ನೂತನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದಾಗಿದೆ.










