ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ, ಅಭ್ಯರ್ಥಿಗಳ ಪರವಾಗಿ ಯಾರೇ ಬಂದು ಪ್ರಚಾರ ನಡೆಸಿದರೂ ಸ್ವಾಗತಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಯಾರೇ ಪ್ರಚಾರಕ್ಕೆ ಬಂದರೂ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು. “ನಮಗೆ ಗೆಲುವು ಮುಖ್ಯ, ಆದ್ದರಿಂದ ಯಾರೇ ಪ್ರಚಾರ ಮಾಡಿದರೂ ಸ್ವಾಗತಿಸುತ್ತೇವೆ” ಎಂದು ಹೇಳಿದರು.ತಮ್ಮ ಪ್ರಚಾರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ದಾವಣಗೆರೆಯಲ್ಲಿ ಇಂದಿನಿಂದಲೇ ಪ್ರಚಾರ ನಡೆಸಲಿದ್ದು, ಏಪ್ರಿಲ್ 5 ಮತ್ತು 6ರಂದು ಬಾಗಲಕೋಟೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುವುದಾಗಿ ತಿಳಿಸಿದರು.
ಎರಡೂ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, “ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನಹಿತ ಮರೆತು ಆಡಳಿತ ನಡೆಸುತ್ತಿದ್ದಾರೆ” ಎಂದು ಟೀಕಿಸಿದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಭಯದಿಂದಲೇ ಸರ್ಕಾರದ ಹಿರಿಯ ನಾಯಕರು ಕ್ಷೇತ್ರಗಳಲ್ಲಿ ತಂಗಿದ್ದಾರೆ ಎಂದು ಆರೋಪಿಸಿದರು.ಹಿಂದಿ ಭಾಷೆ ಕುರಿತಾಗಿ ಮಾತನಾಡಿದ ಅವರು, “ಹಿಂದಿ ಕಲಿಯುವುದರಿಂದ ಕನ್ನಡಕ್ಕೆ ಯಾವುದೇ ಧಕ್ಕೆಯಿಲ್ಲ. ಭಾಷಾ ವಿಷಯದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ” ಎಂದು ಹೇಳಿದರು. ಉಪಚುನಾವಣೆ ಕಣ ಗರಿಗೆದರಿರುವ ನಡುವೆ ರಾಜಕೀಯ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ.


















