ಹಾವೇರಿ: ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಇಂದು ಹಾವೇರಿ ನಗರದ ಕನಕದಾಸ ವೃತ್ತದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಬಳಿಕ ಇದೇ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕನಕದಾಸರ ಪ್ರತಿಮೆಯನ್ನು ಅವರು ಅನಾವರಣಗೊಳಿಸಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಸಚಿವರಾದ ರುದ್ರಪ್ಪ ಲಮಾಣಿ, ಶಾಸಕರಾದ ಶ್ರೀನಿವಾಸ ಮಾನೆ, ಪ್ರಕಾಶ್ ಕೋಳಿವಾಡ, ಬಸವರಾಜ್ ನೀಲಪ್ಪ ಶಿವಣ್ಣನವರ್, ಹೆಸ್ಕಾಂ ಅಧ್ಯಕ್ಷರಾದ ಶ್ರೀ ಅಜ್ಜಂಪೀರ್ ಖಾದ್ರಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಗಣ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಕನಕ ಜಯಂತಿಗೆ ಸಿಎಂ ಡಿ.ಕೆ.ಶಿವಕುಮಾರ್ ಶುಭಾಶಯ
ಕನಕದಾಸರ ತತ್ವ, ಭಕ್ತಿಯೇ ಸಮಾಜಕ್ಕೆ ದೊಡ್ಡ ಸಂದೇಶ
ಜಾತಿ, ಕುಲದ ಹೆಸರಿನಲ್ಲಿ ಭೇದಭಾವ ಮಾಡುವುದನ್ನು ಬಿಟ್ಟು ಮಾನವೀಯತೆ ಮತ್ತು ಸಮಾನತೆಯ ತತ್ವಗಳನ್ನು ಪಾಲಿಸಬೇಕು ಎಂಬ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದೇ ಆ ಮಹಾನ್ ದಾಸರಿಗೆ ಸಲ್ಲಿಸುವ ನಿಜವಾದ ಗೌರವ.
ಕುಲ ಕುಲ ಕುಲವೆಂದು ಹೊಡೆದಾಡಬೇಡಿ, ಇದೆಲ್ಲವನ್ನೂ ಬಿಟ್ಟು ಮಾನವೀಯತೆಯ ಹಾದಿಯಲ್ಲಿ ಸಾಗಬೇಕು ಎಂದು ಕನಕದಾಸರು ನಮಗೆಲ್ಲ ಕಿವಿಮಾತು ಹೇಳಿದ್ದಾರೆ. ಅವರ ಈ ಸಂದೇಶವನ್ನು ನಾವೆಲ್ಲರೂ ಪಾಲಿಸಿದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ. ಕೃಷ್ಣನೇ ತಿರುಗಿ ನಿಂತ ಪ್ರಸಂಗಕ್ಕಿಂತ ಕನಕದಾಸರ ಭಕ್ತಿಗೆ ಮತ್ತೊಂದು ದೊಡ್ಡ ನಿದರ್ಶನ ಬೇಕಿಲ್ಲ.
ಕನಕದಾಸರು ಬಿಟ್ಟುಹೋದ ಆದರ್ಶಗಳು, ತತ್ವಗಳು ಮತ್ತು ಹೆಜ್ಜೆಗುರುತುಗಳು ಸದಾ ನಮ್ಮೊಂದಿಗೆ ಇರಲಿವೆ. ಅವುಗಳನ್ನು ಪಾಲಿಸಿಕೊಂಡು ನಡೆಯುವುದೇ ಮುಖ್ಯ. ಅವರ ಸಂದೇಶವನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ..










