ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ನ. 27 :
ಸಮಾಜವನ್ನು ಒಡೆಯುವ ಆರೋಪಗಳಿಗೆ ಪ್ರತಿಯಾಗಿ, ಸಂತರು ಮತ್ತು ಸಾಮಾಜಿಕ ಪರಿವರ್ತನೆಯ ಹರಿಕಾರರಿಗೆ ಗೌರವ ಸಲ್ಲಿಸುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಹಾಗೂ ಅದರ ಸಂದೇಶವನ್ನು ಜನರಿಗೆ ತಲುಪಿಸುವುದು ಮುಖ್ಯವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರಾದ ಡಾ.ಸಿದ್ದಾರ್ಥ ಗುಂಡಾರ್ಪಿ ತಿಳಿಸಿದರು.
ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕನಕದಾಸ ಜಯಂತಿಗೆ ಚಾಲನೆ ನೀಡಿದ ವಿಚಾರವನ್ನು ಕಾರ್ಯಕರ್ತರು ಸ್ಮರಿಸಿಕೊಳ್ಳಬೇಕು, ಭಾರತೀಯ ಜನತಾ ಪಾರ್ಟಿಯು ಸಮಾಜವನ್ನು ಒಡೆಯಲು ಹಾಗೂ ಸಂವಿಧಾನವನ್ನು ಬದಲಾಯಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದವರು ಆರೋಪಿಸುತ್ತಿದ್ದಾರೆ; ಆದರೆ ಅದು ಕೇವಲ ಮಾತಿನ ಆರೋಪ ಮಾತ್ರ ಪಕ್ಷದ ನಾಯಕರು, ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯ ಮೂಲಕ ಪಕ್ಷವು ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದೆ ಎಂಬುದನ್ನು ತೋರಿಸಬಹುದಾಗಿದೆ ಎಂದರು.
ಭಾರತದ ಇತಿಹಾಸದಲ್ಲಿ ಕನಕದಾಸರು, ಬಸವಣ್ಣನವರು ಸೇರಿದಂತೆ ಯಾವುದೇ ಸಂತರು ಹಾಗೂ ಸಾಮಾಜಿಕ ಪರಿವರ್ತನೆ ತರಲು ಶ್ರಮಿಸಿದವರಿಗೆ ಗೌರವ ಸಲ್ಲಿಸಿ ಗುರುತಿಸುವ ಕೆಲಸವಾಗುತ್ತಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಆರಂಭಿಸಿದ ಕಾರ್ಯವು ಇದಕ್ಕೆ ನಿದರ್ಶನವಾಗಿದೆ ಎಂದು ತಿಳಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಎಲ್ಲರಿಗೂ ಆ ಸಂದೇಶವನ್ನು ತಲುಪಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾದ ಲಿಂಗರಾಜು ಮಾತನಾಡಿ, ಕನಕದಾಸರ ಸಾಹಿತ್ಯದಲ್ಲಿ ಸಂವಿಧಾನ ಮತ್ತು ಸಾಮಾಜಿಕ ಸಮಾನತೆಯ ಆಶಯಗಳು ಅಡಗಿವೆ ಅಧಿಕಾರ, ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನಗಳು ಶಾಶ್ವತವಲ್ಲವಾಗಿದ್ದು, ಮನುಷ್ಯನ ನಿಜವಾದ ಘನತೆ ಅವನ ಗುಣ, ನಡತೆ, ಜ್ಞಾನ ಮತ್ತು ಮಾನವೀಯತೆ ಯಲ್ಲಿದೆ. ಕನಕದಾಸರು ಕಂಡ ಸಮಸಮಾಜದ ಕನಸು ಇಂದಿಗೂ ಸಾಕಾರಗೊಳ್ಳಬೇಕಾದ ಅಗತ್ಯವಿದೆ ಸಮಸಮಾಜ ಸಾಕಾರಗೊಳ್ಳಬೇಕು ಎಂಬ ಆಶಯ ಇಂದಿಗೂ ಈಡೇರಿಲ್ಲದಿರುವುದಕ್ಕೆ ಕಾರಣಗಳಿವೆ. ಸುಮಾರು ಏಳುನೂರು ವರ್ಷಗಳ ಹಿಂದೆ ಬರೆದ ಕನಕದಾಸರ ಸಾಹಿತ್ಯದಲ್ಲಿ ಸಂವಿಧಾನದ ಆಶಯಗಳಿವೆ ಮತ್ತು ಅವು ಇಂದಿನ ಸಂವಿಧಾನಕ್ಕೂ ಪೂರಕವಾಗಿವೆ ಎಂದರು.
ಕನಕದಾಸರ ಕಾಲದಲ್ಲಿ ಜಾತಿ ವ್ಯವಸ್ಥೆ ಹಾಗೂ ಮೇಲು-ಕೀಳು ಎಂಬ ಭಾವನೆ ಬಲವಾಗಿ ಬೇರೂರಿತ್ತು “ಕುಲ-ಕುಲವೆಂದು ಹೊಡೆದಾಡದಿರಿ, ಕುಲದ ನೆಲೆಯನ್ನಾದರೂ ಬಲ್ಲಿರಾ” ಎಂದು ಕನಕದಾಸರು ಪ್ರಶ್ನಿಸಿ ಎಲ್ಲರೂ “ಕುಲ-ಕುಲ” ಎಂದು ಹೊಡೆದಾಡುವುದನ್ನು ಬಿಟ್ಟು, ಸಮಾಜದಲ್ಲಿ ಸಮಾನತೆಯ ಮನೋಭಾವ ವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿ ಅಧಿಕಾರ, ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನ ಗಳು ಶಾಶ್ವತವಲ್ಲ; ಆದರೆ ಮನುಷ್ಯನ ಗುಣ, ನಡತೆ, ಜ್ಞಾನ ಮತ್ತು ಮಾನವೀಯತೆಯಲ್ಲಿ ನಿಜವಾದ ಘನತೆ ಅಡಗಿದೆ ಎಂದು ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಪ್ರತಿಪಾದಿಸಿದ್ದಾರೆ ಎಂದು ವಿವರಿಸಿದರು.
ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮಾತನಾಡಿ, ಸಂತ ಶ್ರೇಷ್ಠ ಕನಕದಾಸರು ಕೇವಲ ಕೀರ್ತನಕಾರರಷ್ಟೇ ಅಲ್ಲದೆ, ಕನ್ನಡ ಸಾಹಿತ್ಯದ ವಿವಿಧ ನೆಲೆಗಳನ್ನು ಕಂಡ ಕವನಕಾರರು, ಇತಿಹಾಸಕಾರರು, ಚಿಂತಕರು, ಸಮಾಜ ಸುಧಾರಕರು ಹಾಗೂ ಹೋರಾಟಗಾರರೂ ಆಗಿದ್ದರು. ಮಹಾಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ, ಅವರ ಉತ್ತಮ ತತ್ವಗಳನ್ನು ಅಳವಡಿಸಿಕೊಂಡು ಸಮಾನತೆಯ ಸಮಾಜವನ್ನು ಕಟ್ಟಲು ಎಲ್ಲರೂ ಮುಂದಾಗಬೇಕು ಕನಕದಾಸರನ್ನು ಇದುವರೆಗೆ ಕೇವಲ ಕೀರ್ತನಕಾರರಾಗಿ ಮಾತ್ರ ನೋಡಲಾಗುತ್ತಿತ್ತು; ಆದರೆ ಇತಿಹಾಸವನ್ನು ಅವಲೋಕಿಸಿದಾಗ ಅವರು ಕನ್ನಡ ಸಾಹಿತ್ಯದ ಎಲ್ಲ ನೆಲೆಗಳನ್ನೂ ಕಂಡವರಾಗಿದ್ದಾರೆ ಅವರು ಕವನಗಳನ್ನು ರಚಿಸುವುದರ ಜೊತೆಗೆ ಸಾಹಿತ್ಯ, ಪುರಾಣ, ಕಥೆ, ನಾಟಕ ಮತ್ತು ಗಮಕಗಳನ್ನು ಬರೆದಿದ್ದಾರೆ. ಕೀರ್ತನೆಗಳ ಮೂಲಕ ಅವರಿಗೆ ಹೆಚ್ಚಿನ ಪ್ರಸಿದ್ಧಿ ದೊರೆತಿದೆ ಅವರು ಚಿಂತಕರಾಗಿ, ಇತಿಹಾಸಕಾರರಾಗಿ, ಸಮಾಜವನ್ನು ತಿದ್ದುವ ಸುಧಾರಕರಾಗಿ ಮತ್ತು ಹೋರಾಟಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇತಿಹಾಸದ ಪ್ರಕಾರ ಅವರ ಜೀವಿತಾವಧಿ ಕ್ರಿ.ಶ. 1506 ರಿಂದ 1606ರವರೆಗೆ ಸುಮಾರು ನೂರು ವರ್ಷಗಳಾಗಿದ್ದರೆ, ಮತ್ತೊಂದು ಕಡೆ ಕ್ರಿ.ಶ. 1506 ರಿಂದ 1609ರವರೆಗೆ ಅಂದರೆ ನೂರಮೂರು ವರ್ಷಗಳ ಕಾಲ ಬದುಕಿದ್ದರು ಎಂಬ ಉಲ್ಲೇಖಗಳೂ ಇವೆ ಎಂದರು.
ದಾಸರಾದ ಬಳಿಕ ಅವರು ರಾಗಿ ರಾಮಾಯಣ, ನಳ ಚರಿತ್ರೆ ಸೇರಿದಂತೆ ಹಲವು ಕೃತಿಗಳು ಮತ್ತು ಕೀರ್ತನೆಗಳನ್ನು ರಚಿಸಿದರು.”ಕುಲ ಕುಲವೆಂದು ಬಡಿದಾಡದಿರಿ” ಎಂಬ ಧಾಟಿಯಲ್ಲಿ ಅವರು ಪದೇಪದೆ ಹೇಳುವ ಮೂಲಕ, ಸಮಾನತೆಗಾಗಿ ಹೋರಾಡಿದ ಮೊಟ್ಟಮೊದಲ ದಾಸರಾಗಿದ್ದಾರೆ. “ಮುತ್ತು ಬಂದಾವ ನೋಡ”, “ತಳ್ಳಣಿಸದಿರು ಕಂಡ್ಯಾ ತಾಳು ಮನವೇ” ಮೂಲಕ ಕಷ್ಟ ಬಂದಾಗಲೂ ಮನಸ್ಸನ್ನು ಸಮಾಧಾನದಿಂದ ಇಟ್ಟುಕೊಂಡು ಸವಾಲುಗಳನ್ನು ಎದುರಿಸಬೇಕು ಎಂಬ ಸಂದೇಶ ನೀಡಿದ್ದಾರೆ. “ಅಡಿಗೆಯ ಮಾಡೋಣ ಬನ್ನಿರೋ” ಮೂಲಕ ಬದುಕನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದಾರೆ.
ಇಂದು ಕನಕದಾಸರ ಕೀರ್ತನೆಗಳ ಕುರಿತು ಜನರಲ್ಲಿ ಚರ್ಚೆಗಳು ನಡೆಯುತ್ತಿದ್ದರೂ, ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರವೃತ್ತಿ ಇದೆ. ಕನಕದಾಸರು ಮಾತ್ರವಲ್ಲದೆ ಇತರ ಮಹಾಪುರುಷರನ್ನೂ ಒಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಮಹಾಪುರುಷರು ಸಮಾಜದ ಸಮಾನತೆ ಮತ್ತು ಒಳಿತಿಗಾಗಿ ಶ್ರಮಿಸಿದವರು. ಯಾವುದೇ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸದೆ, ಅವರಲ್ಲಿರುವ ಉತ್ತಮ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕನಕದಾಸರ ಜಯಂತಿ ಮತ್ತು ಆಶಯಗಳ ಮೂಲಕ ಅವರು ಬಯಸಿದಂತಹ ಉತ್ತಮ ಸಮಾಜವನ್ನು ಕಟ್ಟಲು ಎಲ್ಲರೂ ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಮೋಹನ್ ಕುಮಾರ್, ಕುಮಾರ್, ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ, ಜಿಲ್ಲಾ ಕಾರ್ಯದರ್ಶಿ ರೇಖಾ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ನಗರ ಪ್ರಧಾನ ಕಾರ್ಯದರ್ಶಿ ಬಸವೇಶ್ ನಗರದ ಉಪಾಧ್ಯಕ್ಷ ಮಂತೇಶ್, ಹರೀಶ್, ಪ್ರದೀಪ್ ಕುಮಾರ್, ಶಂಕರ್ ದಾದ, ಮೋಹನ್, ಸತೀಶ್, ರಾಜು, ಅರುಣ್ ಕುಮಾರಿ, ಸೇರಿದಂತೆ ವಿವಿಧ ಮೋರ್ಚಾದ ಪಧಾಧಿಕಾರಿಗಳು ಉಪಸ್ಥಿತರಿದ್ದರು.











