ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 21 : ಬುದ್ದನ ಆಲೋಚನೆ ಅಂಬೇಡ್ಕರ್ ರವರಲ್ಲಿತ್ತು. ಶಿಕ್ಷಣವಂತರಾದಾಗ ಮಾತ್ರ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ ಎಂದು ನವಯಾನ ಬುದ್ದ ಧಮ್ಮ ಸಂಘದ ಪ್ರೊ.ಸಿ.ಕೆ.ಮಹೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪತ್ರಕರ್ತರ ಭವನದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ವಿದ್ಯಾರ್ಥಿ ಒಕ್ಕೂಟ-ರಾಜ್ಯ ಸಮಿತಿ ಉದ್ಗಾಟನಾ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ, ಸವಾಲಿದೆ. ಬುದ್ದನಲ್ಲಿ ಬ್ರಾಹ್ಮಣ್ಯ ವಿರೋಧಿ ವಿಚಾರಗಳಿದ್ದವು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬುದ್ದನ ವಿಚಾರಗಳನ್ನು ಆಳವಾಗಿ ಓದಿ. ಪ್ರೊ.ಬಿ.ಕೃಷ್ಣಪ್ಪನವರ ಚಳುವಳಿಯಂತೆ ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಿವೃತ್ತ ಉಪ ವಿಭಾಗಾಧಿಕಾರಿ ಎಂ.ಮಲ್ಲಿಕಾರ್ಜುನ ಮಾತನಾಡಿ ಹಸಿವು, ಅವಮಾನವನ್ನು ಎದುರಿಸಿ ಯಾರು ಬೆಳೆಯುತ್ತಾರೋ ಅಂತಹವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ. ಡಾ.ಬಿ.ಆರ್.ಅಂಬೇಡ್ಕರ್ ಬಾಲ್ಯದಲ್ಲಿಯೇ ಅವಮಾನ, ಹಿಂಸೆ, ಸಂಕಟ, ಅಸ್ಪøಶ್ಯತೆಯನ್ನು ಅನುಭವಿಸಿದ್ದರಿಂದಲೇ ದೇಶಕ್ಕೆ ಸುಭದ್ರವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಲು ಕಾರಣವಾಯಿತು. ಅಂಬೇಡ್ಕರ್ ವಿಚಾರಧಾರೆಗಳನ್ನು ತಿಳಿದುಕೊಳ್ಳಲು ದೊಡ್ಡ ಅಧಿಕಾರಿಯೇ ಆಗಬೇಕೆಂದಿಲ್ಲ. ಇಚ್ಚಾಶಕ್ತಿಯಿರಬೇಕು. ಆರ್ಥಿಕ
ಶೈಕ್ಷಣಿಕ ಗುಲಾಮಗಿರಿಯಿಂದ ಮೊದಲು ಹೊರಬರಬೇಕಾದರೆ ಸಂವಿಧಾನವನ್ನು ಓದುವ ಸಂಸ್ಕøತಿ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಮಕಾಲೀನ ಸವಾಲುಗಳು ಮತ್ತು ವಿದ್ಯಾರ್ಥಿಗಳು ಎಂಬ ವಿಷಯ ಕುರಿತು ಏರ್ಪಡಿಸಲಾಗಿದ್ದ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯರಾದ ಡಾ.ವಿ.ಬಸವರಾಜು ಹಸಿವು, ಬಡತನ, ಅಸ್ಪøಶ್ಯತೆ ಇವುಗಳು ಸಮಾಜದಲ್ಲಿರುವ ಪಿಡುಗುಗಳು. ಎಲ್ಲಾ ರಂಗಗಳು ಕಲುಷಿತಗೊಂಡಿವೆ. ಡಾ.ಬಿ.ಆರ್.ಅಂಬೇಡ್ಕರ್‍ರವರ ಆಶಯದಂತೆ ಸಮಾನತೆ, ಭಾತೃತ್ವ ಎನ್ನುವುದು ಇನ್ನು ಮರೀಚಿಕೆಯಾಗಿದೆ. ಸ್ವಜನಪಕ್ಷಪಾತ, ಭ್ರಷ್ಟಾಚಾರ ಇನ್ನು ನಿವಾರಣೆಯಾಗಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ
ಸಾಂಸ್ಕøತಿಕ ಎನ್ನುವುದು ಸಂದಿಗ್ದ ಪರಿಸ್ಥಿತಿಯಲ್ಲಿದೆ. ಜಾತಿಗಳೆ ಅಸಮಾನತೆ ಕೇಂದ್ರಗಳು. ಸಣ್ಣತನ, ಅಹಂ ಬಿಟ್ಟು ಆರೋಗ್ಯ ಪೂರ್ಣ ಸಮಾಜ ಕಟ್ಟಬೇಕಿದೆ. ಸಂವಿಧಾನದ ಕಡೆ ಎಲ್ಲರು ಮುಖ ಮಾಡಬೇಕು. ಹಣಬಲ, ತೋಳ್ಬಲ, ಜಾತಿಬಲದ ಕೈಗೆ ಪ್ರಜಾಪ್ರಭುತ್ವ ಸಿಕ್ಕಿಕೊಂಡಿದೆ ಎಂದು ವಿಷಾಧಿಸಿದರು.
ವಿದ್ಯಾಸಂಸ್ಥೆ, ವಿಶ್ವವಿದ್ಯಾನಿಲಯಗಳಲ್ಲಿ ತಾರತಮ್ಯ, ಅಸಮಾನತೆಯಿದೆ. ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಿಕ್ಷಣ ನೋವಿನಿಂದ ಕೂಡಿರಬಾರದು. ವಿದ್ಯಾರ್ಥಿಗಳ ಆತ್ಮಹತ್ಯೆ ಜಾಸ್ತಿಯಾಗುತ್ತಿದೆ. ಇವೆಲ್ಲವುಗಳನ್ನು ತಡೆಯುವತ್ತ ಸಾಗಬೇಕೆಂದು ಕರ್ನಾಟಕ ವಿದ್ಯಾರ್ಥಿ ಒಕ್ಕೂಟದವರಿಗೆ ಸಲಹೆ ನೀಡಿದರು.
ವಿಜ್ಞಾನ ಮತ್ತು ಮೂಢನಂಬಿಕೆ ವಿಷಯ ಕುರಿತು ಡಾ.ರಾಜಶೇಖರ್ ಕೆ. ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ರಾಜ್ಯ ಸಮಿತಿ ಅಧ್ಯಕ್ಷ ರಮೇಶ್ ಎಂ.ವೇದಿಕೆಯಲ್ಲಿದ್ದರು.


















