ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ನೀಟ್ ಅವಾಂತರಗಳನ್ನು ಖಂಡಿಸಿ ಹಾಗೂ ದೆಹಲಿಯ ಜಂತರ್ ಮಂತರ್ನಲ್ಲಿ ಸೋನಂ ವಾಂಗ್ಚುಕ್ ಮತ್ತು ಪ್ರತಿಭಟನಾಕಾರರು ನಡೆಸುತ್ತಿರುವ ಪಾರ್ಲಿಮೆಂಟ್ ಚಲೋ ಬೆಂಬಲಿಸಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ನೇತೃತ್ವದಲ್ಲಿ ಇಂದು ಚಿತ್ರದುರ್ಗ ವಿಜ್ಞಾನ ಕಾಲೇಜು ಮುಂದೆ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಐಡಿಎಸ್ಓ ರಾಜ್ಯ ಕಛೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಮಾತನಾಡುತ್ತಾ, “ನೀಟ್ ಪರೀಕ್ಷೆಯಲ್ಲಿ ಆಗಿರುವ ಅಕ್ರಮಗಳನ್ನು ಖಂಡಿಸಿ, ದೇಶದ ಪರಿಸರ ತಜ್ಞ ಹಾಗೂ ಶಿಕ್ಷಕ ಸೋನಂ ವಾಂಗ್ಚುಕ್ ಅವರು ಕಳೆದ 23 ದಿನಗಳಿಂದ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಇಲ್ಲಿಯವರೆಗೂ 20 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವುಗಳಿಗೆ ನ್ಯಾಯ ಸಿಗಬೇಕು ಮತ್ತು ದೇಶದ ಶಿಕ್ಷಣ ವ್ಯವಸ್ಥೆ ಉಳಿಯಬೇಕು ಎಂಬ ಕೂಗಿನೊಂದಿಗೆ ಅವರು ಹೋರಾಟ ನಡೆಸಿದ್ದಾರೆ. ಆದರೆ ಸರ್ಕಾರ ಮಾತ್ರ ಕಿಂಚಿತ್ತೂ ಸ್ಪಂದಿಸುತ್ತಿಲ್ಲ. ಅದರ ಬದಲಿಗೆ ಕೂಡಿ ಅವರನ್ನು ಸರ್ಕಾರ ಅನಧಿಕೃತವಾಗಿ ಬಂಧಿಸಿ ಆಸ್ಪತ್ರೆಯಲ್ಲಿ ಕೂಡಿ ಹಾಕಿದೆ. ಇಷ್ಟೇ ಅಲ್ಲದೆ ಇಂದು ಪಾರ್ಲಿಮೆಂಟ್ ಚಲೋ ಹೋರಾಟ ನಡೆಸಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿ ಆಶೀರ್ವಾದ ಸಿಡಿಸಲಾಗಿದೆ. ನ್ಯಾಯಯುತ ಹೋರಾಟವನ್ನು ಹತ್ತಿಕ್ಕುತ್ತಿರುವ ಸರ್ಕಾರದ ಈ ನಡೆ ಅತ್ಯಂತ ನಾಚಿಕೆಗೇಡಿತನದ್ದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ಹಾಗೂ ದೇಶಾದ್ಯಂತ ಇಂದು ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಕೇಳಿಸಿಕೊಳ್ಳದೆ ಹೋರಾಟಗಾರರ ಮೇಲೆ ದಾಳಿ ನಡೆಸುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ!” ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು.
ಎಐಡಿಎಸ್ಓ ಜಿಲ್ಲಾ ಸಂಚಾಲಕರಾದ ಕೆ ಈರಣ್ಣ ಮಾತನಾಡಿ, “ಭಾರತದ ವಿದ್ಯಾರ್ಥಿ ಸಮುದಾಯವು ಕಳೆದ ಕೆಲವು ತಿಂಗಳುಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ NTA ಯಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ. ನಾವು ಸರ್ಕಾರದಿಂದ ಹೊಣೆಗಾರಿಕೆಯನ್ನು ಆಗ್ರಹಿಸುತ್ತಿದೇವೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕು ಹಾಗೂ NTA ಅನ್ನು ರದ್ದುಗೊಳಿಸಬೇಕೆಂದು ಈ ಹೋರಾಟದ ಬೇಡಿಕೆ. ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡದ ಸರ್ಕಾರವು ಹೊಣೆಗೇಡಿ ಆಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸೋನಂ ವಾಂಗ್ಚುಕ್ ಮತ್ತು ಇತರ ಅನೇಕ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಭಾರತದ ವಿದ್ಯಾರ್ಥಿ ಸಮುದಾಯದಲ್ಲಿ ಬೆಳೆಯುತ್ತಿರುವ ಆಕ್ರೋಶದ ಅಭಿವ್ಯಕ್ತಿಯಾಗಿದೆ. ಪ್ರತಿಭಟನಾಕಾರರ ಬೇಡಿಕೆಗಳಿಗೆ ಕಿವಿಗೊಡದೆ ಮತ್ತು ಅವರೊಂದಿಗೆ ಸಂವಾದವನ್ನು ಆರಂಭಿಸದೆ, ಲಾಟಿಚಾರ್ಜ್ ನಡೆಸಿರುವುದು ಕೇವಲ ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ, ಇದು ಸರ್ಕಾರವು ತನ್ನ ನಾಗರಿಕರ ಬಗ್ಗೆ ಹೊಂದಿರುವ ನಿರಂಕುಶ ಮತ್ತು ಅಮಾನವೀಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪೊಲೀಸ್ ಆಡಳಿತದ ಈ ಕ್ರಮವನ್ನು AIDSO ತೀವ್ರವಾಗಿ ವಿರೋಧಿಸುತ್ತದೆ ಹಾಗೂ ಭಾರತದ ನಾಗರಿಕರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿ ಸಮುದಾಯಕ್ಕೆ ಧೈರ್ಯದಿಂದ ಮುಂದೆ ಬಂದು ಪ್ರಸ್ತುತ ನಡೆಯುತ್ತಿರುವ ಚಳುವಳಿಯನ್ನು ತೀವ್ರಗೊಳಿಸಲು ಕರೆ ನೀಡುತ್ತದೆ. ಹೋರಾಟದ ಧ್ವನಿಗಳನ್ನು ಹತ್ತಿಕ್ಕುವುದನ್ನು ನಿಲ್ಲಿಸಿ, ಸೋನಂ ವಾಂಗ್ಚುಕ್ ಮತ್ತು ಪ್ರತಿಭಟನಾಕಾರರೊಂದಿಗೆ ತಕ್ಷಣ ಸಂವಾದವನ್ನು ಆರಂಭಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಸಂಚಾಲಕ ಕೆ ಈರಣ್ಣ ಮತ್ತು ವಿದ್ಯಾರ್ಥಿಗಳಾದ ಅಭಿನಯಾ, ಎಮ್ ಅಮೂಲ್ಯ, ಶೆಹಜಾದಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.










