ಬೆಂಗಳೂರು : ಹೊಸ ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ಸಿಹಿಸುದ್ದಿ, ರಾಜ್ಯದ ಅರ್ಹ ಬಡ ಕುಟುಂಬಗಳಿಗೆ ಹೊಸ ಬಿಪಿಎಲ್ ಪಡಿತರ ಚೀಟಿ ವಿತರಿಸಲು ಶೀಘ್ರದಲ್ಲೇ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅರ್ಹರಿಗೆ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಅರ್ಜಿ ಸಲ್ಲಿಸುವ ನಿಖರ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅನರ್ಹ ಫಲಾನುಭವಿಗಳು ಹಾಗೂ ನಕಲಿ ಕಾರ್ಡ್ಗಳನ್ನು ಪತ್ತೆಹಚ್ಚಿ ರದ್ದುಪಡಿಸುವ ಪರಿಶೀಲನಾ ಕಾರ್ಯ ಬಹುತೇಕ ಪೂರ್ಣಗೊಂಡಿರುವುದರಿಂದ, ಇನ್ನು ಮುಂದೆ ಅರ್ಹ ಬಡ ಫಲಾನುಭವಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ಹೊಸ ಕಾರ್ಡ್ಗಳನ್ನು ವಿತರಿಸಲು ಇಲಾಖೆ ಸಂಪೂರ್ಣ ಸಿದ್ಧತೆ ಕೈಗೊಂಡಿದೆ.
ಮತ್ತೊಂದೆಡೆ, ಪಡಿತರದಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆಹಾರ ಇಲಾಖೆಯು ‘ಅನ್ನಸೇವೆ’ ಎಂಬ ನೂತನ ಮೊಬೈಲ್ ಆ್ಯಪ್ ಅನ್ನು ಪರಿಚಯಿಸಿದೆ. ಇದರಿಂದ ಸಾರ್ವಜನಿಕರು ಕಚೇರಿಗಳಿಗೆ ಅಲೆಯದೆ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ.










