ನವದೆಹಲಿ: ದೇಶಾದ್ಯಂತ ವಾಹನ ಸವಾರರು ಬಾಕಿ ಉಳಿಸಿಕೊಂಡಿರುವ ಇ-ಚಲನ್ ದಂಡದ ಮೊತ್ತವನ್ನು ವಸೂಲಿ ಮಾಡಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಬಾಕಿ ದಂಡ ಪಾವತಿಸದ ವಾಹನಗಳನ್ನು ವಶಪಡಿಸಿಕೊಳ್ಳುವುದು ಮಾತ್ರವಲ್ಲದೆ, ವಾಹನ ಸಂಬಂಧಿತ ಪ್ರಮುಖ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.
ರಸ್ತೆ ಸುರಕ್ಷತೆಗೆ ಸಂಬಂಧಿಸಿದ ‘ಎಸ್. ರಾಜಶೇಖರನ್ ವಿರುದ್ಧ ಕೇಂದ್ರ ಸರ್ಕಾರ’ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಈ ಮಹತ್ವದ ನಿರ್ದೇಶನ ನೀಡಿದೆ. ದೇಶದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಲ್ಲಿಕೆಯಾದ ಒಟ್ಟು ಇ-ಚಲನ್‌ಗಳ ಪೈಕಿ ಸರಿಸುಮಾರು 49,194.05 ಕೋಟಿ ರೂಪಾಯಿ ದಂಡ ಬಾಕಿ ಇದ್ದು, ಇದರಲ್ಲಿ ಕೇವಲ 26,175.05 ಕೋಟಿ ರೂಪಾಯಿ ಮಾತ್ರ ವಸೂಲಾಗಿದೆ ಎಂಬ ಮಾಹಿತಿ ನ್ಯಾಯಾಲಯಕ್ಕೆ ಲಭ್ಯವಾಗಿದೆ. ಪೊಲೀಸರು ಲಕ್ಷಾಂತರ ಚಲನ್‌ಗಳನ್ನು ನೀಡಿದರೆ ಸಾಲದು, ಆ ದಂಡವನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡುವ ಕೆಲಸವಾಗಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಬಾಕಿ ದಂಡ ತೀರಿಸದ ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ನವೀಕರಣ, ನಕಲಿ ಆರ್‌ಸಿ ನೀಡುವುದು, ವಿಳಾಸ ಬದಲಾವಣೆ, ಫಿಟ್‌ನೆಸ್ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ವಿತರಣೆಯನ್ನು ತಡೆಹಿಡಿಯಲಾಗುತ್ತದೆ. ಇಂತಹ ವಾಹನಗಳನ್ನು ‘ಪರಿವಾಹನ್’ ಪೋರ್ಟಲ್‌ನಲ್ಲಿ ಕಪ್ಪುಪಟ್ಟಿಗೆ (ಬ್ಲ್ಯಾಕ್‌ಲಿಸ್ಟ್) ಸೇರಿಸಲಾಗುತ್ತಿದ್ದು, ಇದರಿಂದಾಗಿ ವಾಹನದ ಮಾರಾಟ ಅಥವಾ ಮಾಲೀಕತ್ವ ವರ್ಗಾವಣೆ ಸಾಧ್ಯವಾಗುವುದಿಲ್ಲ. ಜೊತೆಗೆ, ಪೊಲೀಸರು ಹಠಾತ್ ತಪಾಸಣೆ ನಡೆಸಿ ನಿಯಮ ಪಾಲಿಸದ ವಾಹನಗಳನ್ನು ಜಪ್ತಿ ಮಾಡಬಹುದಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದವರ ಚಾಲನಾ ಪರವಾನಗಿ (ಡಿಎಲ್) ನವೀಕರಣವನ್ನು ಅಮಾನತುಗೊಳಿಸಲು ಮತ್ತು ಸದ್ಯ ಚಾಲ್ತಿಯಲ್ಲಿರುವ ಪರವಾನಗಿಯನ್ನು ರದ್ದುಪಡಿಸಲು ಕೂಡ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಲಾಗಿದೆ.
ಇದಲ್ಲದೆ, ರಸ್ತೆಗಳಲ್ಲಿ ಅಳವಡಿಸಲಾಗುವ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಗಳು ಕೃತಕ ಬುದ್ಧಿಮತ್ತೆ (ಎಐ) ಆಧಾರಿತವಾಗಿರಬೇಕು ಹಾಗೂ ನಿಯಮಗಳ ಪ್ರಕಾರ 12 ಬಗೆಯ ಸಂಚಾರ ಉಲ್ಲಂಘನೆಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿರಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ವಾಹನ್-4, ಸಾರಥಿ, ಇ-ಚಲನ್, ಇ-ಡಾರ್ ಮತ್ತು ಐರಾಡ್ ವ್ಯವಸ್ಥೆಗಳನ್ನು ಸಮಗ್ರಗೊಳಿಸಿ, ಪಾರದರ್ಶಕತೆ ಕಾಯ್ದುಕೊಳ್ಳಲು ಕೇಂದ್ರ ಸಾರಿಗೆ ಸಚಿವಾಲಯವು ಸಾರ್ವಜನಿಕ ಆನ್‌ಲೈನ್ ಡ್ಯಾಶ್‌ಬೋರ್ಡ್ ರೂಪಿಸಬೇಕೆಂದು ನ್ಯಾಯಾಲಯ ತಾಕೀತು ಮಾಡಿದೆ. ಈ ಎಲ್ಲಾ ನಿಯಮಗಳು ಕೇವಲ ಕಾಗದದ ಮೇಲೆ ಉಳಿಯದೆ ನೆಲಮಟ್ಟದಲ್ಲಿ ಜಾರಿಯಾಗಬೇಕು, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.










