ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿ ಹಾಗೂ ನೌಕರರು ತಮ್ಮ ಸೇವಾ ವಿವರಗಳನ್ನು “ವಿದ್ಯುನ್ಮಾನ ಸೇವಾ ವಹಿ” (e-SR) ನಲ್ಲಿ ಕಡ್ಡಾಯವಾಗಿ ನವೀಕರಿಸಿ ಪ್ರಕಟಿಸುವಂತೆ ಆರ್ಥಿಕ ಇಲಾಖೆಯ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2.0 (HRMS-2.0) ನಿರ್ದೇಶನಾಲಯವು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.
ಅಕ್ಟೋಬರ್-2026 ರ ಅಂತ್ಯದ ವೇಳೆಗೆ ಹಳೆಯ HRMS-1.0 ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ನವೆಂಬರ್-2026 ರಿಂದ ಕೇವಲ e-SR ಪ್ರಕಟಗೊಂಡಿರುವ ನೌಕರರಿಗೆ ಮಾತ್ರ HRMS-2.0 ತಂತ್ರಾಂಶದಲ್ಲಿ ವಾರ್ಷಿಕ ವೇತನ ಬಡ್ತಿ, ಮುಂಬಡ್ತಿ, ವರ್ಗಾವಣೆ ಸೇರಿದಂತೆ ಪ್ರಮುಖ ಸೇವಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
2021-22ನೇ ಸಾಲಿನಿಂದಲೇ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ಸಿಬ್ಬಂದಿಯ ಸೇವಾ ವಹಿಯನ್ನು e-SR ಗೆ ಬದಲಾಯಿಸಲು ಸೂಚಿಸಲಾಗಿದ್ದರೂ ಹಾಗೂ ಮಾರ್ಚ್-2026ರ ಒಳಗೆ ಪ್ರಕ್ರಿಯೆ ಮುಗಿಸಲು ನಿರ್ದೇಶನ ನೀಡಿದ್ದರೂ, ಹಲವು ಇಲಾಖೆಗಳಲ್ಲಿ ಇದರ ಪ್ರಗತಿ ತೃಪ್ತಿಕರವಾಗಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಇನ್ನು ಮುಂದೆ ನೌಕರರ ವಾರ್ಷಿಕ ವೇತನ ಬಡ್ತಿ, ಹಿಂದಿನ ಬಡ್ತಿ ಹಾಗೂ ವೇತನ ಸಂಬಂಧಿತ ಸೇವೆಗಳನ್ನು e-SR ಮತ್ತು HRMS-2 ರ ನೇರ (Live) ವಿವರಗಳ ಆಧಾರದ ಮೇಲೆಯೇ ನಿರ್ವಹಿಸಲಾಗುತ್ತದೆ.

ಅಲ್ಲದೆ, ಪ್ರಧಾನ ಮಹಾಲೇಖಪಾಲರ (CAG) ಕಾಗದ ರಹಿತ ಕಾರ್ಯವಿಧಾನದ ಭಾಗವಾಗಿ ನಿವೃತ್ತಿ ವೇತನ (ಪೆನ್ಷನ್) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. 2026ರ ಏಪ್ರಿಲ್ 1 ರಿಂದಲೇ ಎಲ್ಲಾ ಪಿಂಚಣಿ ಪ್ರಸ್ತಾವನೆಗಳನ್ನು (Form-7) ಕೇವಲ ಆನ್‌ಲೈನ್ ಮೂಲಕ ಸಿದ್ಧಪಡಿಸಿದ e-SR ದಾಖಲೆಗಳೊಂದಿಗೆ ರವಾನಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಯಾವುದೇ ರೀತಿಯ ಸೇವಾ ತೊಡಕುಗಳು ಉಂಟಾಗದಂತೆ ತಕ್ಷಣವೇ ಸೇವಾ ವಿವರಗಳನ್ನು ಪರಿಶೀಲಿಸಿ, ತಿದ್ದುಪಡಿಗಳನ್ನು ಪೂರ್ಣಗೊಳಿಸಿ e-SR ಪ್ರಕಟಿಸಲು ಸೂಚಿಸಲಾಗಿದೆ.











