ಸುದ್ದಿಒನ್,ಬೆಂಗಳೂರು,ಜೂನ್.1: ರಾಜ್ಯ ಸರ್ಕಾರಿ ನೌಕರರ 2026-27ನೇ ಸಾಲಿನ ವಾರ್ಷಿಕ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯ ಕಾಲಾವಧಿಯನ್ನು ಜೂನ್ 30, 2026ರವರೆಗೆ ವಿಸ್ತರಿಸಿ ಕರ್ನಾಟಕ ಸರ್ಕಾರ ಸೋಮವಾರ (ಜೂನ್ 01) ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಹೊರಡಿಸಲಾಗಿದ್ದ ನಿಯಮಾವಳಿಗಳ ಪ್ರಕಾರ, ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಗೆ ಏಪ್ರಿಲ್ 15, 2026 ರಿಂದ ಮೇ 31, 2026 ರವರೆಗೆ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಆದರೆ, ನಿಗದಿತ ಅವಧಿಯು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಸಾರ್ವತ್ರಿಕ ವರ್ಗಾವಣೆಯ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಲು ಅವಧಿಯನ್ನು ವಿಸ್ತರಿಸುವುದು ಅತ್ಯಗತ್ಯವೆಂದು ಪರಿಗಣಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

2026-27ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯ ಅವಧಿಯನ್ನು 30.06.2026ರವರೆಗೆ ವಿಸ್ತರಿಸಲಾಗಿದೆ.ದಿನಾಂಕ 13.04.2026 ರಂದು ಹೊರಡಿಸಲಾದ ಮೂಲ ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಎಲ್ಲಾ ಮಾರ್ಗಸೂಚಿಗಳು, ನಿಯಮಗಳು ಮತ್ತು ನಿಬಂಧನೆಗಳು ಈ ವಿಸ್ತರಿತ ಅವಧಿಗೂ ಯಥಾವತ್ತಾಗಿ ಅನ್ವಯವಾಗಲಿವೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸೇವಾ ನಿಯಮಗಳು-3) ಸರ್ಕಾರದ ಉಪ ಕಾರ್ಯದರ್ಶಿಗಳಾದ ಎನ್. ಆರ್. ಶಿವಶಂಕರ್ ಅವರ ಸಹಿಯೊಂದಿಗೆ ಈ ಆದೇಶವನ್ನು ಹೊರಡಿಸಲಾಗಿದ್ದು, ಸರ್ಕಾರದ ಎಲ್ಲಾ ಮುಖ್ಯಸ್ಥರು ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಜಾರಿಗೆ ಬರುವಂತೆ ಸೂಚನೆ ನೀಡಲಾಗಿದೆ. ಈ ನಿರ್ಧಾರದಿಂದಾಗಿ ವರ್ಗಾವಣೆ ಪ್ರಕ್ರಿಯೆಯ ನಿರೀಕ್ಷೆಯಲ್ಲಿದ್ದ ಮತ್ತು ಪ್ರಕ್ರಿಯೆ ಬಾಕಿ ಉಳಿಸಿಕೊಂಡಿದ್ದ ಸರ್ಕಾರಿ ನೌಕರರಿಗೆ ಹಾಗೂ ಇಲಾಖೆಗಳಿಗೆ ಮತ್ತಷ್ಟು ಕಾಲಾವಕಾಶ ಸಿಕ್ಕಂತಾಗಿದೆ.










