ನವದೆಹಲಿ: ದಸರಾ, ದೀಪಾವಳಿ ಸೇರಿದಂತೆ ಹಬ್ಬಗಳ ಸರಣಿ ಆರಂಭವಾಗುತ್ತಿದ್ದಂತೆ ಗ್ರಾಹಕರಲ್ಲಿ ಹಣದ ಅಗತ್ಯತೆ ಹೆಚ್ಚುತ್ತದೆ. ಹೊಸ ಗೃಹೋಪಯೋಗಿ ವಸ್ತುಗಳು, ಶಾಪಿಂಗ್ ಅಥವಾ ವೈಯಕ್ತಿಕ ಅಗತ್ಯಗಳಿಗಾಗಿ ಅನೇಕರು ಹಣಕಾಸಿನ ನೆರವು ಹುಡುಕುತ್ತಾರೆ. ಜನರ ಇದೇ ತುರ್ತು ಪರಿಸ್ಥಿತಿಯನ್ನು ಬಂಡವಾಳವಾಗಿಸಿಕೊಂಡಿರುವ ಸೈಬರ್ ವಂಚಕರು, ವಾಟ್ಸಾಪ್ ಮೂಲಕ ಆಕರ್ಷಕ ಸಾಲದ ಆಫರ್ಗಳನ್ನು ಕಳುಹಿಸಿ ಬಲೆ ಬೀಸುತ್ತಿದ್ದಾರೆ.
ದಾಖಲೆಗಳಿಲ್ಲದೆ ತ್ವರಿತ ಸಾಲ”, “ಕಡಿಮೆ ಬಡ್ಡಿದರ”, “ಕ್ಷಣಾರ್ಧದಲ್ಲಿ ಅನುಮೋದನೆ” ಎಂಬಿತ್ಯಾದಿ ಆಕರ್ಷಕ ಸಂದೇಶಗಳನ್ನು ನಂಬಿ ಜನರು ಕ್ಲಿಕ್ ಮಾಡಿದರೆ, ಅವರ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆಯ ಗೌಪ್ಯ ವಿವರಗಳು ಸೈಬರ್ ಕಳ್ಳರ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.
ಕೆಲವು ಅಧಿಕೃತ ಹಣಕಾಸು ಸಂಸ್ಥೆಗಳು ವಾಟ್ಸಾಪ್ ಮೂಲಕ ಮಾಹಿತಿ ನೀಡಬಹುದಾದರೂ, ಬಹುತೇಕ ಸಂದೇಶಗಳು ನಕಲಿ ಹಾಗೂ ವಂಚನೆಯ ಜಾಲಗಳಾಗಿರುತ್ತವೆ. ಆದ್ದರಿಂದ ಯಾವುದೇ ಲೋನ್ ಲಿಂಕ್ ಕ್ಲಿಕ್ ಮಾಡುವ ಮುನ್ನ ಈ 5 ಪ್ರಮುಖ ಅಂಶಗಳನ್ನು ಪರಿಶೀಲಿಸುವಂತೆ ಸೈಬರ್ ತಜ್ಞರು ಹಾಗೂ ಹಣಕಾಸು ನಿಯಂತ್ರಕರು ಎಚ್ಚರಿಸಿದ್ದಾರೆ:
ಸಾಲದ ಲಿಂಕ್ ಕ್ಲಿಕ್ ಮಾಡುವ ಮುನ್ನ ಗಮನಿಸಬೇಕಾದ 5 ಅಂಶಗಳು
ಸಾಲ ನೀಡುವ ಸಂಸ್ಥೆಯ ಅಧಿಕೃತತೆ ಪರಿಶೀಲಿಸಿ (RBI ನೋಂದಣಿ)
ಸಾಲ ನೀಡುವ ಕಂಪನಿ ಅಥವಾ ಆ್ಯಪ್ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಡಿಯಲ್ಲಿ ನೋಂದಾಯಿತ ಬ್ಯಾಂಕ್ ಅಥವಾ ಎನ್ಬಿಎಫ್ಸಿ (NBFC) ಆಗಿದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಮಧ್ಯವರ್ತಿ ಆ್ಯಪ್ ಆಗಿದ್ದರೂ ಮೂಲ ಸಾಲ ಒದಗಿಸುವ ಅಧಿಕೃತ ಬ್ಯಾಂಕ್ ಯಾವುದು ಎಂದು ತಿಳಿಯುವುದು ಕಡ್ಡಾಯ.

ಕಳುಹಿಸಿದವರ ಪ್ರೊಫೈಲ್ ಮತ್ತು ವೆಬ್ಸೈಟ್ ಪರೀಕ್ಷಿಸಿ
ವಾಟ್ಸಾಪ್ ಪ್ರೊಫೈಲ್ನಲ್ಲಿರುವ ಲೋಗೋ, ಹೆಸರು ಅಥವಾ ಡಿಸ್ಪ್ಲೇ ಫೋಟೋ ನೋಡಿ ಯಾರನ್ನೂ ಕುರುಡಾಗಿ ನಂಬಬೇಡಿ. ಸಂಶಯಾಸ್ಪದ ಚಿಕ್ಕ ಲಿಂಕ್ಗಳು (shortened links) ಅಥವಾ ಎಪಿಕೆ (APK) ಫೈಲ್ಗಳನ್ನು ಡೌನ್ಲೋಡ್ ಮಾಡಬೇಡಿ. ಸಂದೇಶ ಬಂದಾಗ ನೇರವಾಗಿ ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಸತ್ಯಾಸತ್ಯತೆ ಪರಿಶೀಲಿಸಿ. ಅನುಮಾನ ಬಂದರೆ ಅಂತಹ ನಂಬರ್ಗಳನ್ನು ತಕ್ಷಣವೇ ಬ್ಲಾಕ್ ಮಾಡಿ ರಿಪೋರ್ಟ್ ಮಾಡಿ.
ಒಟಿಪಿ ಅಥವಾ ಗೌಪ್ಯ ವಿವರಗಳನ್ನು ಹಂಚಿಕೊಳ್ಳಬೇಡಿ

ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಒಟಿಪಿ (OTP), ಎಟಿಎಂ ಪಿನ್ (PIN), ಡೆಬಿಟ್/ಕ್ರೆಡಿಟ್ ಕಾರ್ಡ್ನ ಫೋಟೋಗಳು ಅಥವಾ ಸಿವಿವಿ (CVV) ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಧಿಕೃತ ಬ್ಯಾಂಕ್ಗಳು ಎಂದಿಗೂ ಈ ವಿವರಗಳನ್ನು ವಾಟ್ಸಾಪ್ನಲ್ಲಿ ಕೇಳುವುದಿಲ್ಲ. ವಾಟ್ಸಾಪ್ ಮೂಲಕ ಬರುವ ಗೂಗಲ್ ಫಾರ್ಮ್ಗಳಲ್ಲಿ ವೈಯಕ್ತಿಕ ವಿವರ ತುಂಬುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.
ನಿಯಮ ಮತ್ತು ಷರತ್ತುಗಳನ್ನು ಸೂಕ್ಷ್ಮವಾಗಿ ಓದಿ
ಆಫರ್ ನೈಜವೆಂದು ದೃಢಪಟ್ಟ ನಂತರವೂ ವಾರ್ಷಿಕ ಬಡ್ಡಿದರ (APR), ಪ್ರೊಸೆಸಿಂಗ್ ಶುಲ್ಕಗಳು, ಮರುಪಾವತಿಯ ಅವಧಿ ಹಾಗೂ ವಿಳಂಬ ಶುಲ್ಕಗಳನ್ನು ಸ್ಪಷ್ಟವಾಗಿ ಗಮನಿಸಿ. ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಹಿಡನ್ ಚಾರ್ಜ್ಗಳಿಂದಾಗಿ ಅಂತಿಮವಾಗಿ ಮರುಪಾವತಿಸಬೇಕಾದ ಮೊತ್ತ ದುಪ್ಪಟ್ಟಾಗಿರುವ ಸಾಧ್ಯತೆ ಇರುತ್ತದೆ.

ಮುಂಗಡ ಹಣ (Upfront fee) ಕೇಳಿದರೆ ಎಚ್ಚರ ವಹಿಸಿ
ಸಾಲ ಮಂಜೂರು ಮಾಡಲು, ಪ್ರೊಸೆಸಿಂಗ್ ಶುಲ್ಕವೆಂದು ಅಥವಾ ಕಾಗದಪತ್ರ ಪರಿಶೀಲನೆಗೆಂದು ವೈಯಕ್ತಿಕ ಖಾತೆಗೆ ಮುಂಗಡ ಹಣ ಜಮೆ ಮಾಡುವಂತೆ ಕೇಳಿದರೆ ಅದು ನೂರಕ್ಕೆ ನೂರು ವಂಚನೆ. ಯಾವುದೇ ಅಧಿಕೃತ ಸಂಸ್ಥೆಯು ಸಾಲ ವಿತರಿಸುವ ಮುನ್ನ ಅಸಹಜ ಮುಂಗಡ ಠೇವಣಿಯನ್ನು ಕೇಳುವುದಿಲ್ಲ.
ತುರ್ತು ಅಗತ್ಯಗಳಿಗಾಗಿ ಸಾಲ ಪಡೆಯುವ ಮುನ್ನ ಕೈಗೊಳ್ಳುವ ಕೆಲವೇ ನಿಮಿಷಗಳ ಎಚ್ಚರಿಕೆಯು ನಿಮ್ಮನ್ನು ದೊಡ್ಡ ಆರ್ಥಿಕ ನಷ್ಟ ಹಾಗೂ ಸೈಬರ್ ಬಲೆಯಿಂದ ರಕ್ಷಿಸುತ್ತದೆ. ಯಾವುದೇ ಸಂಶಯಾಸ್ಪದ ಸಂದೇಶಗಳು ಬಂದರೆ ಅದಕ್ಕೆ ಪ್ರತಿಕ್ರಿಯಿಸದೆ, ಅಧಿಕೃತ ಸೈಬರ್ ಕ್ರೈಮ್ ಪೋರ್ಟಲ್ ಮೂಲಕ ದೂರು ದಾಖಲಿಸುವುದು ಒಳಿತು.












