Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೊಳಕಾಲ್ಮೂರು: 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದರೋಡೆ ಪ್ರಕರಣದ ಆರೋಪಿ ಕೊನೆಗೂ ಅರೆಸ್ಟ್

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ಸುಮಾರು 22 ವರ್ಷಗಳ ಹಿಂದೆ ಬಸ್ ಪ್ರಯಾಣಿಕರನ್ನು ಬೆದರಿಸಿ ಚಿನ್ನಾಭರಣ ಹಾಗೂ ವಸ್ತುಗಳನ್ನು ದರೋಡೆ ಮಾಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಉರುವಕೊಂಡ ತಾಲ್ಲೂಕಿನ ನಿಂಬಗಲ್ ಗ್ರಾಮದ ನಿವಾಸಿ ಭಾಸ್ಕರ್ ಅಲಿಯಾಸ್ ಯರ್ರಿಸ್ವಾಮಿ (49) ಬಂಧಿತ ಆರೋಪಿಯಾಗಿದ್ದಾನೆ.

ಮೊಳಕಾಲ್ಮೂರು ತಾಲ್ಲೂಕಿನ ತುಮಕೂರ್ಲಹಳ್ಳಿ ಗೇಟ್ ಬಳಿ ಚಲಿಸುತ್ತಿದ್ದ ಮಹದೇವಿ ಬಸ್ಸನ್ನು ಅಡ್ಡಗಟ್ಟಿದ್ದ ಆರೋಪಿ ಭಾಸ್ಕರ್ ಹಾಗೂ ಆತನ ಏಳು ಜನ ಸಹಚರರು ಪ್ರಯಾಣಿಕರಿಗೆ ಮಚ್ಚು ಮತ್ತು ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ್ದರು. ಪ್ರಯಾಣಿಕರ ಬಳಿಯಿದ್ದ ಚಿನ್ನಾಭರಣಗಳು, ಕೈಗಡಿಯಾರಗಳು ಹಾಗೂ ವಿಸಿಪಿ ಪ್ಲೇಯರ್ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯ ನಂತರ ಆರೋಪಿಯು ತನ್ನ ಸ್ವಗ್ರಾಮವನ್ನು ತೊರೆದು ನಿರಂತರವಾಗಿ ಊರುಗಳನ್ನು ಬದಲಾಯಿಸುತ್ತಾ ತಲೆಮರೆಸಿಕೊಂಡಿದ್ದನು. ಸ್ಥಳೀಯ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ವಿಚಾರಣೆಗೂ ಹಾಜರಾಗದ ಕಾರಣ, ನ್ಯಾಯಾಲಯವು ಈತನ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿ ಪ್ರಕರಣವನ್ನು ಎಲ್ಪಿಆರ್ ಎಂದು ಘೋಷಿಸಿತ್ತು.

ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಚಳ್ಳಕೆರೆ ಪೊಲೀಸ್ ಉಪಾಧೀಕ್ಷಕರವರಾದ ಸತ್ಯನಾರಾಯಣರಾವ್ ಹಾಗೂ ಮೊಳಕಾಲ್ಮೂರು ಪೊಲೀಸ್ ವೃತ್ತ ನಿರೀಕ್ಷಕರವರಾದ ನಾಗರಾಜ ಆರ್. ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪಿಎಸ್ಐ ಮಹೇಶ ಲಕ್ಷ್ಮಣ ಹೊಸಪೇಟೆ ಹಾಗೂ ಸಿಬ್ಬಂದಿಗಳಾದ ಆರ್. ಓಬಣ್ಣ ಮತ್ತು ಗೋವಿಂದ ಅವರನ್ನೊಳಗೊಂಡ ತಂಡವು ತಾಂತ್ರಿಕ ಮಾಹಿತಿ ಮತ್ತು ಬಾತ್ಮೀದಾರರ ನೆರವಿನಿಂದ ಆರೋಪಿ ಆಂಧ್ರಪ್ರದೇಶದ ತಿರುಪತಿಯ ಪದ್ಮಾವತಿನಗರದಲ್ಲಿ ನೆಲೆಸಿರುವ ಖಚಿತ ಮಾಹಿತಿ ಕಲೆಹಾಕಿತು. ಅಲ್ಲಿ ಟೆಲಿಫೋನ್ ಕೇಬಲ್ ತಂತಿ ಅಗೆಯುವ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಯಿತು.

ಬಂಧಿತ ಆರೋಪಿಯನ್ನು ಮೊಳಕಾಲ್ಮೂರು ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಹಳೆಯ ಪ್ರಕರಣದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಸೆರೆಹಿಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸೆ ಅವರು ಶ್ಲಾಘಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now