ಚಿಕ್ಕಮಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದಾರೆ. ಇದು ಸಚಿವಾಕಾಂಕ್ಷಿಗಳಿಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಇದೇ ವಿಚಾರಕ್ಕೆ ಮಾಧ್ಯಮದವರು ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದಾಗ, ಈಗ ಸಚಿವ ಸ್ಥಾನ ಸಿಕ್ಕಿದರು ಕುರ್ಚಿ ಮೇಲೆ ಕೂತು ಬಿಸಿ ಮಾಡಬೇಕಾಗುತ್ತದೆ ಅಷ್ಟೇ ಎಂದಿದ್ದಾರೆ.
ನನಗೆ ಈಗ ಸಮಯವಿಲ್ಲ. ಹಳ್ಳಿಯಲ್ಲಿ ಸಾಕಷ್ಟು ಕೆಲಸಗಳಿವೆ. ನನ್ನ ಕ್ಷೇತ್ರದಲ್ಲಿಯೇ ನನಗೆ ಹೆಚ್ಚು ಕೆಲಸವಿದೆ. ಕೊಟ್ಟರೆ ಕೊಡಲಿ. ಇಲ್ಲದಿದ್ದರು ಪರವಾಗಿಲ್ಲ. ಸರ್ಕಾರ ಬಂದ ಮೇಲೆ ಅತಿವೃಷ್ಟಿಯಲ್ಲಿ ಬಳಲಿ ಹೋಗಿದೆ. ಅಭಿವೃದ್ದಿಗೆ ಸ್ವಲ್ಪ ಕುಂಠಿತವಾಗಿತ್ತು. ಹೀಗಾಗಿ ಅಭಿವೃದ್ಧಿಯತ್ತ ಗಮನ ಕೊಡುತ್ತಿದ್ದೇನೆ. ಸಚಿವ ಸಂಪುಟದ ಬಗ್ಗೆ ಹೆಚ್ಚು ಗಮನ ಕೊಡುತ್ತಿಲ್ಲ.
ಕಾಮಗಾರಿ ವಿಚಾರದಲ್ಲಿ ಗಡ್ಕರಿಯವರನ್ನು ಭೇಟಿ ಮಾಡಬೇಕಿತ್ತು. ಆ ವಿಚಾರವಾಗಿ ದೆಹಲಿಗೆ ಹೋಗಿದ್ದೆ. ಬೇಡ ಅಂತ ಅಲ್ಲ ಈಗ ನನಗೆ ಬೇಡ. ಸಚಿವ ಸ್ಥಾನ ಕೊಟ್ಟರು ಈಗ ಏನು ಸಾಧನೆ ಮಾಡುವುದಕ್ಕೆ ಸಾಧ್ಯವಿಲ್ಲ. ಸೀಟಿನ ಮೇಲೆ ಕೂರಬಹುದೇ ವಿನಃ ಮಹತ್ಕರವಾದ ಕ್ರಾಂತಿಕಾರಿ ಬದಲಾವಣೆ ಮಾಡಲು ಈ ಎಂಟು ತಿಂಗಳಲ್ಲಿ ಸಾಧ್ಯವಿಲ್ಲ. ಆ ಸೀಟನ್ನು ಬಿಸಿ ಮಾಡಬೇಕು ಅಷ್ಟೇ. ಆ ಸೀಟು ಬಿಸಿ ಮಾಡುವುದಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.






GIPHY App Key not set. Please check settings