ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಅಂಬಲಗೆರೆ ಗ್ರಾಮವು ಬ್ಯಾಡರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಹಿರಿಯೂರಿನಿಂದ 15 ಕಿಲೋಮೀಟರ್ ದೂರ ಈಶಾನ್ಯಕ್ಕೆ,
ಹಿರಿಯೂರು- ಹೇಮದಳ – ಅಂಬಲಗೆರೆ- ರಂಗೇನಹಳ್ಳಿ ಮಾರ್ಗದಲ್ಲಿದೆ.
ಈ ಗ್ರಾಮಕ್ಕೆ ಹಳೆಗ್ರಾಮ ನಿವೇಶನ ಇರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ. ಆದರೆ ಗ್ರಾಮದ ಪ್ರೌಢಶಾಲೆ ಇರುವ ಸ್ಥಳದಲ್ಲಿ ಹಿಂದೆ ಹಳೆಗ್ರಾಮ ನಿವೇಶನ ಇರಬಹುದೆಂದು ಇಲ್ಲಿನ ಹಿರಿಯರು ಹೇಳುತ್ತಾರೆ.
ಹೆಸರಿನ ಮೂಲ :
ಅಂಬಲ ಎಂದರೆ ನಡುಮನೆಯ ವಿಶಾಲ ಜಾಗ, ಹಜಾರ ಎಂಬ ಅರ್ಥವಿದೆ. ಹಾಗಾಗಿ ಕೆರೆಯ ಮುಂದಿನ ವಿಶಾಲವಾದ ಜಾಗದಲ್ಲಿ ನಿರ್ಮಾಣ ಮಾಡಿರುವ ಗ್ರಾಮಕ್ಕೆ ಅಂಬಲಗೆರೆ ಎಂಬ ಹೆಸರು ಬಂದಿದೆ.
ಗ್ರಾಮದ ದಕ್ಷಿಣ ದಿಕ್ಕಿನಲ್ಲಿ ವಿಶಾಲವಾಗಿ ಹರಡಿರುವ ಜಾಗದಲ್ಲಿ ಕೆರೆಯಿದ್ದು,ಇದಕ್ಕೆ ಹೇಮದಳ ಕೆರೆಯಿಂದ ನೀರು ಹರಿಯುತ್ತದೆ. ಈ ಕೆರೆಯು ತುಂಬಿದ ನಂತರ ಪೂರ್ವಕ್ಕೆ ಇರುವ ವೇದಾವತಿ ನದಿಗೆ ಹರಿಯುತ್ತದೆ.
ಭೌಗೋಳಿಕವಾಗಿ ಗಮನಿಸಬಹುದಾದರೆ ಹಿಂದಿನಿಂದಲೂ ಈ ಪ್ರದೇಶ ಹಾಗೂ ಈ ಗ್ರಾಮದ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣ ಒಣ ಭೂಪ್ರದೇಶ ಇರುವ ಮೈದಾನದ ಜಾಗವಾಗಿದೆ. ಮಳೆಯ ಪ್ರಮಾಣ ತೀವ್ರವಾಗಿ ಕಡಿಮೆ ಇರುವ ಜಾಗ ಇದಾಗಿದೆ .
ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಪರಿಚಯ:
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯವು ವಿಜಯನಗರ ಶೈಲಿಯಲ್ಲಿ ಕ್ರಿಸ್ತಶಕ 15 -16ನೇ ಶತಮಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ.
ಈ ದೇವಾಲಯವು ಗರ್ಭಗೃಹ,ಅಂತರಾಳ,
ನವರಂಗ,ಮಹಾಮಂಟಪ, ಮಹಾದ್ವಾರ,ದೀಪಸ್ತಂಭ ಹಾಗೂ ಗರುಡಗಂಬಗಳನ್ನು ಒಳಗೊಂಡ ವಿಶಾಲವಾದ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಒಂದು ಅಡಿ ಎತ್ತರದ ಗರುಡಪೀಠದ ಮೇಲೆ ಸುಮಾರು ಐದು ಅಡಿ ಎತ್ತರದ ರಂಗನಾಥ ಸ್ವಾಮಿಯ ಮೂರ್ತಿ ಇದೆ. ಕಿರೀಟ ಮುಕುಟಧಾರಿಯಾದ ರಂಗನಾಥನು ತನ್ನ 4 ಕೈಗಳಲ್ಲಿ ಶಂಖ,ಚಕ್ರ,ಗದೆ ಹಾಗೂ ಅಭಯಹಸ್ತ ಮುದ್ರೆ ಹಿಡಿದು ಸಮಭಂಗಿಯಲ್ಲಿ ನಿಂತಿದ್ದಾನೆ.
ಆಭರಣಗಳಾದ ಕೈಬಳೆ, ತೋಳುಬಂದಿ,ಕಾಲುಕಡಗ ಮೊದಲಾದವುಗಳನ್ನು ಧರಿಸಿರುವನು. ಅಕ್ಕಪಕ್ಕದಲ್ಲಿ ಶ್ರೀದೇವಿ ಮತ್ತು ಭೂದೇವಿಯರ ವಿಗ್ರಹಗಳಿವೆ. ಅಂತರಾಳದ ಬಾಗಿಲುವಾಡದಲ್ಲಿ ವೈಷ್ಣವ ದ್ವಾರಪಾಲಕರ ಉಬ್ಬು ಶಿಲ್ಪಗಳಿವೆ. ಅವರು ಶಂಖ, ಚಕ್ರ,ಗದೆ ಹಾಗೂ ಅಭಯ ಹಸ್ತಮುದ್ರೆಯಲ್ಲಿ ನಿಂತಿರುವರು. ಗರ್ಭಗೃಹದ ಬಾಗಿಲುವಾಡದಲ್ಲಿ ಸರಪಳಿ,ಬಳ್ಳಿಯ ಅಲಂಕರಣೆ ಇದೆ. ನವರಂಗದಲ್ಲಿ 4 ಕಂಬಗಳಿದ್ದು ಇವುಗಳನ್ನು ಬಹುಮುಖಗಳಲ್ಲಿ ಕಡೆಯಲಾಗಿದ್ದು, ಮೇಲ್ಭಾಗದಲ್ಲಿ ಪುಷ್ಪ ಬೋದಿಗೆಗಳಿವೆ. ಕಂಬಗಳ ಚಚ್ಚೌಕ ಭಾಗದಲ್ಲಿ ಮೇಲೆ ಬೆಣ್ಣೆ ಕದಿಯುತ್ತಿರುವ ಕೃಷ್ಣ, ಆನೆ, ಶಂಖ,ಕೀರ್ತಿಮುಖ, ಯತಿ,ನರ್ತಕಿ,ಬಿಲ್ಲು ಹಿಡಿದು ಕೈ ಮುಗಿದು ನಿಂತ ವೀರನ ಶಿಲ್ಪ,ಲಕ್ಷ್ಮಿ,ಹೂವಿನ ಅಲಂಕಾರ, ಕಾಳಿಂಗಮರ್ಧನ,ಯತಿ, ವಿಷ್ಣು, ಕಾಮಧೇನು, ಆಂಜನೇಯ, ಗರುಡಶಿಲ್ಪ ಮತ್ತು ಶಾಸನಗಳಿವೆ. ನವರಂಗದ ಭುವನೇಶ್ವರಿಯಲ್ಲಿ ಅಷ್ಟಕೋನಾಕೃತಿಯಲ್ಲಿ ಜೋಡಿಸಿದ ಚಪ್ಪಡಿಗಳಲ್ಲಿ ಮಧ್ಯದಲ್ಲಿ ಮುಗುಚಿದ ಪದ್ಮದ ಅಲಂಕರಣೆ ಇದೆ. ಈ ಕಮಲವು ಮೊಗ್ಗಿನಾಕಾರದಲ್ಲಿದ್ದು ಇದ್ದು,ಇಳಿಬಿದ್ದಿದೆ. ನವರಂಗದ ಬಾಗಿಲುವಾಡದಲ್ಲಿ ವೈಷ್ಣವ ದ್ವಾರಪಾಲಕರ ಶಿಲ್ಪಗಳಿದ್ದು, ಶಂಖ,ಚಕ್ರ, ಗದೆಗಳನ್ನು ಹಿಡಿದಿದ್ದಾರೆ.
ಬಾಗಿಲುವಾಡವು ಬಳ್ಳಿ, ಸರಪಳಿ ಮತ್ತು ವಜ್ರ ಶಾಖೆಗಳನ್ನು ಹೊಂದಿದೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿಯ ಉಬ್ಬು ಕೆತ್ತನೆ ಇದೆ.ಬಾಗಿಲುವಾಡದ ಮೇಲೆ ಅನಂತಶಯನನ್ನು ರಚಿಸಲಾಗಿದ್ದು ಅವನ ಕಾಲನ್ನು ಶ್ರೀದೇವಿ ಮತ್ತು ಭೂದೇವಿಯರು ಒತ್ತುತ್ತಿರುವಂತೆ ಚಿತ್ರಿಸಲಾಗಿದೆ. ಮಹಾಮಂಟಪದಲ್ಲಿ ಒಟ್ಟು 22 ಕಂಬಗಳಿವೆ.
ಇವುಗಳನ್ನು ಬಹುಮುಖಗಳಲ್ಲಿ ಕಡೆಯಲಾಗಿದ್ದು, ಮೇಲ್ಭಾಗದಲ್ಲಿ ವಿಜಯನಗರ ಶೈಲಿಯ ಪುಷ್ಪಬೋದಿಗೆಗಳಿವೆ.
ಈ ಕಂಬಗಳ ಚಚ್ಚೌಕ ಭಾಗದಲ್ಲಿ ವಿವಿಧ ಬಗೆಯ ಶಿಲ್ಪಗಳಿವೆ.ಅವುಗಳಲ್ಲಿ ವಾಲಿ- ಸುಗ್ರೀವರ ಹೋರಾಟ, ಚೌರಿ ಹಿಡಿದ ಭಕ್ತೆ , ಕೈಮುಗಿದು ನಿಂತ ಭಕ್ತ,ಬಾಳೆಹಣ್ಣು ತಿನ್ನುತ್ತಿರುವ ಕೋತಿ, ಆನೆ,ಹಂಸ,ಕೂರ್ಮ, ವಿಷ್ಣು, ಶಂಖ, ಚಕ್ರ,ವರಾಹ,ಮೀನು, ಅನಂತಶಯನ, ಮಿಥುನ ಶಿಲ್ಪ,ಯತಿ… ಇತ್ಯಾದಿಗಳಿವೆ.
ಸುತ್ತಲೂ ಕಕ್ಷಾಸನವಿದ್ದು ಅದರಲ್ಲಿ ವ್ಯಾಳ,ಆನೆ,ಕೋತಿ ಮತ್ತು ಹೂವಿನ ಕೆತ್ತನೆಗಳಿವೆ. ದೇವಾಲಯದ ಸುತ್ತಲೂ ಪ್ರಾಕಾರ ಗೋಡೆ ಇದ್ದು ಅದರ ಮೇಲೆ ಆನೆ,ಹಾವು,ಸೂರ್ಯ ಮೊದಲಾದವುಗಳ ಉಬ್ಬು ರಚನೆಗಳಿವೆ.
ಈ ದೇವಾಲಯದ ಜಾತ್ರೆಯು ಹಂಪೆ ಹುಣ್ಣಿಮೆಯ ಸಮಯದಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಗರ್ಭಗೃಹದ ಮೇಲೆ ದ್ರಾವಿಡ ಮಾದರಿಯ ತ್ರಿತಲ ಶಿಖರವಿದೆ. ಶಿಖರವು ಗ್ರೀವ,ಶಿಖರ ಹಾಗೂ ಲೋಹದ ಕಳಸಗಳನ್ನು ಹೊಂದಿದೆ. ಎಡಭಾಗದಲ್ಲಿ ಲಕ್ಷ್ಮಿಯ ಚಿಕ್ಕ ಗುಡಿ ಇದೆ.ಇದು ಗರ್ಭಗೃಹ, ಮತ್ತು ಅಂತರಾಳಗಳನ್ನು ಹೊಂದಿದೆ.ದೇವಾಲಯದ ಮುಂಭಾಗದಲ್ಲಿ ಮಹಾದ್ವಾರವಿದ್ದು ದ್ವಾರಪಾಲಕರು ಮತ್ತು ಸಾಲಭಂಜಿಕೆಯರ ಉಬ್ಬುಶಿಲ್ಪಗಳಿವೆ.
ಇವುಗಳ ಮೇಲೆ ಹೂ ಬಳ್ಳಿಗಳ ಅಲಂಕರಣೆಗಳಿವೆ.
ದೇವಾಲಯದ ಮುಂದೆ ಎರಡು ಕಲ್ಲಿನ ಕಂಬಗಳಿವೆ. ಸುಮಾರು 25 ಅಡಿ ಎತ್ತರದ ಒಂದು ಕಂಬದ ಮೇಲೆ ಮೂರು ಅಡಿ ಎತ್ತರದ ಗರುಡ ಶಿಲ್ಪವಿದೆ. ಇನ್ನೊಂದು ದೀಪಸ್ತಂಭವಾಗಿದ್ದು, ಇದು ಸುಮಾರು 20 ಅಡಿ ಎತ್ತರವಾಗಿದೆ.
ಗರುಡಗಂಬ:
ದೇವಾಲಯದ ಎದುರು ಇರುವ ಗರುಡಗಂಬವು ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ. ನೆಲಮಟ್ಟದಿಂದ 25 ಅಡಿ ಎತ್ತರದ ಗರುಡಗಂಬದ ಮೇಲೆ ಮೂರು ಅಡಿ ಎತ್ತರದ ಗರುಡ ಶಿಲ್ಪವಿದೆ. ಜನರ ನಂಬಿಕೆಯಂತೆ ಈ ಗರುಡ ಶಿಲ್ಪವು ಲಂಬವಾಗಿ 90° ನೇರವಾಗಿ ನಿಂತರೆ ಈ ಪ್ರದೇಶದಲ್ಲಿ ಮಳೆ- ಬೆಳೆ ಸಮೃದ್ಧವಾಗಿ ಆಗುತ್ತದೆ. ಈ ಗರುಡ ಶಿಲ್ಪವು ಮುಂಭಾಗಕ್ಕೆ10°-30° ಬಾಗಿದರೆ ನಾಡಿನಲ್ಲಿ ಯಾವುದಾದರೂ ಕೆಡುಕು,ಅನಾಹುತ ಸಂಭವಿಸುತ್ತದೆ, ಹಿಂಭಾಗಕ್ಕೆ ಬಾಗಿದರೆ ಬರಗಾಲ ನಿಶ್ಚಿತ ಎಂಬುದು ಹಿರಿಯರ ಅನಿಸಿಕೆಯಾಗಿದೆ. ವೈಜ್ಞಾನಿಕವಾಗಿ ಹೇಳುವುದಾದರೆ ಗರುಡ ಶಿಲ್ಪದ ಕೆಳಭಾಗವು ದುಂಡಾಕೃತಿಯ ಕಲ್ಲಿನ ಆಕೃತಿಯಲ್ಲಿ ಇದ್ದು ವಾತಾವರಣದ ತೇವಾಂಶ ಹಾಗೂ ಗಾಳಿಯ ಚಲನೆ, ದಿಕ್ಕಿಗೆ ಅನುಗುಣವಾಗಿ ಈ ಗರುಡ ಶಿಲ್ಪವು ಬಾಗುತ್ತದೆ ಎಂದು ಹೇಳಲಾಗುತ್ತದೆ.
ಇದು ಯಾಕಾಗಿ ಈ ರೀತಿ ಬಾಗುತ್ತದೆ,ಏಳುತ್ತದೆ ಎಂಬುದು ಮತ್ತಷ್ಟು ವೈಜ್ಞಾನಿಕ ವಿಶ್ಲೇಷಣೆ ಹಾಗೂ ತಜ್ಞರ ಅಭಿಪ್ರಾಯ- ಅಧ್ಯಯನಗಳಿಂದ ತಿಳಿಯಬೇಕಾಗಿದೆ. ಇದನ್ನು ಕೆಳಗೆ ನಿಂತು ಮಾತ್ರ ನಾವು ಗಮನಿಸಬಹುದು.ಈವರೆಗೆ ಈ ಗರುಡ ಶಿಲ್ಪದ ಕಲ್ಲನ್ನು ಹತ್ತಿರದಿಂದ ಯಾರು ಕಂಡವರಿಲ್ಲ ಎಂದು ಹೇಳಲಾಗುತ್ತದೆ. ಗರುಡಗಂಬದ ಕೆಳಭಾಗದಲ್ಲಿ ಭಿನ್ನಗೊಂಡ ಹಿಂದಿನ ಎರಡು ಗರುಡ ಶಿಲ್ಪಗಳನ್ನು ಇಂದಿಗೂ ಕಾಣಬಹುದಾಗಿದೆ.
ಶಾಸನಗಳ ವಿವರಣೆ:
ಈ ದೇವಾಲಯದ ಕಂಬದ ಮೇಲಿನ ಶಾಸನವು
ತಿರುವೆಂಗಳನಾಥನ ನಂದಾದೀಪಕ್ಕೆಂದು ಪುರದ ಸುಂಕವನ್ನು ನೀಡಿದ ಉಲ್ಲೇಖವನ್ನು ಹೊಂದಿದೆ.ಇಲ್ಲಿಗೆ ಸಮೀಪದ ಉಪ್ಪಾರಹಳ್ಳಿಯ ಶಿಲಾ ಶಾಸನವು ಕ್ರಿಸ್ತಶಕ 1554ಕ್ಕೆ ಸೇರಿದ್ದು ವಿಜಯನಗರದ ಅರಸ ಸದಾಶಿವರಾಯನ ಕಾಲದ್ದಾಗಿದೆ. ಈ ಶಾಸನದಲ್ಲಿ ಅಂಬಲಗೆರೆ ತಿರುವೆಂಗಳನಾಥ ದೇವರಿಗೆ ರಾಯದುರ್ಗ ಸೀಮೆಯ ಗೋಸಿಕೆರೆ ನಾಡೊಳಗಿನ ಹರತಿಸ್ಥಳದ ಉಪಕರಿಹಳ್ಳಿಯನ್ನು ತನ್ನ ತಂದೆ ವೆಂಗಳರಾಜನ ಹೆಸರಿನಲ್ಲಿ ತಿರುಮಲರಾಜನು ವೆಂಗಳಾಪುರವೆಂದು ನಾಮಕರಣ ಮಾಡಿ ಹಾಗೂ ಅವರಿಗೆ ಪುಣ್ಯವಾಗಲೆಂದು ಈ ಗ್ರಾಮವನ್ನು ದತ್ತಿಬಿಟ್ಟ ಉಲ್ಲೇಖವನ್ನು ಹೊಂದಿದೆ.
ಅಂಬಲಗೆರೆಯ ರಂಗನಾಥ ಸ್ವಾಮಿ ದೇವಾಲಯವು ವಿಜಯನಗರ ಶೈಲಿಯಲ್ಲಿರುವ ಈ ಭಾಗದ ಸುಂದರವಾದ ದೇವಾಲಯವಾಗಿದೆ. ವಿಜಯನಗರದ ಅರಸ ಸದಾಶಿವರಾಯನ ಕಾಲದಲ್ಲಿ ಈ ರಂಗನಾಥ ಸ್ವಾಮಿ ದೇವರಿಗೆ ಉಪರಿಕರಹಳ್ಳಿ ಪ್ರತಿನಾಮವಾದ ವೆಂಗಳಾಪುರವನ್ನು ದಾನ ಮಾಡಿದ ಶಿಲಾಶಾಸನವಿದೆ. ಇದಕ್ಕೆ ಪೂರಕ ಎನ್ನುವಂತೆ ಕ್ರಿಸ್ತಶಕ 1517ರ ಶ್ರೀ ಕೃಷ್ಣದೇವರಾಯನ ಕಾಲದ ಶಾಸನದಲ್ಲಿ (ಎ.ಕ 11 ಹಿರಿಯೂರು -36 ) ಶ್ರೀಮನ್ಮಹಾನಾಯಕಚಾರ್ಯ ಹರತೈಮಂಗಳ ತಿಪ್ಪಳನಾಯ್ಕ ಎಂಬ ಹೆಸರಿನ ಉಲ್ಲೇಖವಿದೆ. ಇದರಿಂದ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ತಿಪ್ಪನಾಯ್ಕನು ಹರತಿ ಮತ್ತು ಐಮಂಗಳದ ಆಡಳಿತವನ್ನು ನೋಡಿಕೊಳ್ಳುತ್ತಿದ್ದನೆಂಬುದು ಶಿಲಾಶಾಸನ ಮತ್ತು ತಾಮ್ರಪಟಗಳ ಬರಹಗಳಿಂದ ಸ್ಪಷ್ಟವಾಗುತ್ತದೆ. ಹಾಗಾಗಿ ರಂಗನಾಥ ಸ್ವಾಮಿ ದೇವಾಲವು ಅಂಬಲಗೆರೆಯಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ಹೊತ್ತಿಗೆ ತಿಪ್ಪನಾಯ್ಕನ ನೇತೃತ್ವದಲ್ಲಿ ನಿರ್ಮಾಣವಾಗಿರುವುದನ್ನು ಖಚಿತಪಡಿಸಬಹುದು.
ಪೂರಕ ಮಾಹಿತಿ: ಚಿತ್ರದುರ್ಗ ಜಿಲ್ಲಾ ದೇವಾಲಯ ಕೋಶ ಡಾ.ಎಸ್ ವೈ ಸೋಮಶೇಖರ್. ಹಂಪಿ ವಿವಿ.
ಪ್ರತಿ ಶನಿವಾರ ಈ ದೇವಾಲಯದಲ್ಲಿ ವಿಶೇಷ ಅಲಂಕಾರ,ಪೂಜೆ,ಪ್ರಾರ್ಥನೆ ಹಾಗೂ ಭಕ್ತರಿಂದ ಅನ್ನದಾಸೋಹ ನಡೆಯುತ್ತದೆ. ಈ ದೇವರನ್ನು ಮನೆದೇವರನ್ನಾಗಿ ಮಾಡಿಕೊಂಡ ಸಾವಿರಾರು ಕುಟುಂಬಗಳು ಈ ದೇವರಿಗೆ ನಡೆದುಕೊಳ್ಳುತ್ತಾರೆ.
ಪ್ರತಿ ವರ್ಷ ಜಾತ್ರಾ ಸಮಯ ಹಾಗೂ ಶ್ರಾವಣ ಮಾಸದಲ್ಲಿ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಯುಗಾದಿಯ ನಂತರದ ದಿನಗಳಲ್ಲಿ ಈ ದೇವರ ರಥೋತ್ಸವ ವಿಜೃಂಭಣೆಯಿಂದ ಭಕ್ತರ ಸಮ್ಮುಖದಲ್ಲಿ ಜರುಗುತ್ತದೆ.
ದೇವಾಲಯದ ಬಳಿಯಲ್ಲಿ ಮದುವೆ,ನಾಮಕರಣ ಮುಂತಾದ ಶುಭ ಸಮಾರಂಭಗಳು ಸದಾ ಕಾಲ ನಡೆಯುತ್ತಿರುತ್ತದೆ. ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲೂ ರಂಗನಾಥ ಸ್ವಾಮಿಯ ಹೆಸರಿನ ಮೇಲೆ ರಂಗಪ್ಪ,ರಂಗಮ್ಮ, ರಂಗನಾಥ,ರಂಗಸ್ವಾಮಿ… ಮುಂತಾದ ಹೆಸರಿನ ವ್ಯಕ್ತಿಗಳು ಪ್ರತಿ ಮನೆಯಲ್ಲಿ ಕಂಡು ಬರುತ್ತಾರೆ.






