ಸುದ್ದಿಒನ್, ಹೊಸದುರ್ಗ, ಜೂನ್. 12 : ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರನ್ನು ಪರಿಚಯಿಸಿಕೊಂಡು, ಅವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು, ಆನಂತರ ಹೆದರಿಸಿ ನಗದು ಹಾಗೂ ಚಿನ್ನಾಭರಣಗಳನ್ನು ಪೀಕುತ್ತಿದ್ದ ಅಂತರ ಜಿಲ್ಲಾ ಖತರ್ನಾಕ್ ಆರೋಪಿಯನ್ನು ಬಂಧಿಸುವಲ್ಲಿ ಹೊಸದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆ ಸರಹದ್ದಿನಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡಿದ್ದ ಆರೋಪಿಯು, ಆಕೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ ಸತತವಾಗಿ ಹೆದರಿಸುತ್ತಿದ್ದನು. ಈ ಕುರಿತು ನೊಂದ ಮಹಿಳೆ ನೀಡಿದ ದೂರಿನ ಮೇರೆಗೆ ದಿನಾಂಕ 05.06.2026 ರಂದು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 340/2026 ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)-2023 ರ ಕಲಂ 64, 77, 351(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಸದರಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಚಿತ್ರದುರ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ|| ಶಿವಕುಮಾರ್ ಆರ್. ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಹಿರಿಯೂರು ಡಿವೈಎಸ್‌ಪಿ ಶ್ರೀ ಶಿವಕುಮಾರ್ ಟಿ.ಎಂ. ರವರ ಉಸ್ತುವಾರಿಯಲ್ಲಿ, ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ (ಪಿಐ) ರಮೇಶ್ ಕೆ.ಟಿ. ರವರ ನೇತೃತ್ವದ ತಂಡವು ಭರ್ಜರಿ ಕಾರ್ಯಾಚರಣೆ ನಡೆಸಿತು. ಈ ವಿಶೇಷ ತಂಡದಲ್ಲಿ ಹೊಸದುರ್ಗ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (ಪಿ.ಎಸ್.ಐ) ಗಳಾದ ಶ್ರೀಶೈಲ, ಮಹೇಶ್ ಕುಮಾರ್ ಎನ್. ಮತ್ತು ಪ್ರೊಬೇಷನರಿ ಪಿ.ಎಸ್.ಐ. ಪ್ರಿಯಾಂಕ ಸೇರಿದಂತೆ ಸಿಬ್ಬಂದಿಗಳಾದ ಕುಮಾರ್, ಉಮೇಶ, ಕಿರಣ್ ಕುಮಾರ್, ಗಂಗಾದರ, ತಿಪ್ಪೇಸ್ವಾಮಿ, ಚಂದ್ರಪ್ಪ, ರಾಜಣ್ಣ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ಸತೀಶ್ ಅವರು ಪಾಲ್ಗೊಂಡಿದ್ದರು. ಈ ವಿಶೇಷ ತಂಡವು ತಾಂತ್ರಿಕ ಹಾಗೂ ಅತ್ಯಂತ ಗುಪ್ತ ಮಾಹಿತಿಗಳನ್ನು ಸಂಗ್ರಹಿಸಿ, ದಿನಾಂಕ 07.06.2026 ರಂದು ಆರೋಪಿಯನ್ನು ಯಶಸ್ವಿಯಾಗಿ ವಶಕ್ಕೆ ಪಡೆದುಕೊಂಡಿದೆ.
ಬಂಧಿತ ಆರೋಪಿಯನ್ನು ಹೊಳಲ್ಕೆರೆ ತಾಲ್ಲೂಕಿನ ಇಡೇಹಳ್ಳಿ ಗ್ರಾಮದ ನಿವಾಸಿ, ಈಶ್ವರಪ್ಪ ಎಂಬುವವರ ಪುತ್ರ, ವೃತ್ತಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಬಸವರಾಜ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ವಿವಿಧ ಠಾಣೆಗಳ ಒಟ್ಟು 08 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು ಹದಿನೇಳು ಲಕ್ಷ ರೂಪಾಯಿ ಬೆಲೆಬಾಳುವ 158 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಬೆಲೆ ಬಾಳುವ ಒಂದು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಜಾಲವನ್ನು ಭೇದಿಸಿ, ಆರೋಪಿಯನ್ನು ಬಂಧಿಸುವಲ್ಲಿ ಹಾಗೂ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಐ.ಪಿ.ಎಸ್. ರವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.






