ಸುದ್ದಿಒನ್, ಹೊಳಲ್ಕೆರೆ, ಜೂನ್. 12 : ತಾಲ್ಲೂಕಿನ ಜೈಪುರ ಗ್ರಾಮದ ಸ್ನೇಹ ಪಬ್ಲಿಕ್ ಶಾಲೆಯ ಸಮೀಪ ಜೂನ್ 07 ರಂದು ಸುಮಿತ್ರ (48 ವರ್ಷ) ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪುತ್ರ ಕಿರಣ್ ನೀಡಿದ ದೂರಿನ ಮೇರೆಗೆ ಹೊಳಲ್ಕೆರೆ ಪೊಲೀಸರು ಕೇವಲ ಎರಡೇ ದಿನಗಳಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶೇಷ ತನಿಖಾ ತಂಡ ರಚನೆ ;
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಭಂಡಾರು, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಉಪವಿಭಾಗದ ಡಿವೈಎಸ್‌ಪಿ ಹಾಗೂ ಹೊಳಲ್ಕೆರೆ ವೃತ್ತ ನಿರೀಕ್ಷಕರ ಮೇಲ್ವಿಚಾರಣೆಯಲ್ಲಿ ತಂಡ ಕಾರ್ಯಾಚರಣೆ ನಡೆಸಿತು.
ಬಂಧಿತ ಆರೋಪಿಗಳು :
ದೇವಕುಮಾರ್ (49), ಅಂತರಗಂಗೆ ಗ್ರಾಮ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಭರತರೆಡ್ಡಿ, ಉಜ್ಜಯಿನಿಪುರ ಗ್ರಾಮ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರನ್ನು ಜೂನ್ 09 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತು ಸಹ ಆರೋಪಿ ದಿಲೀಪ್ ಟಿ (28), ಜೋಡಿ ಕೋಡಿಹಳ್ಳಿ ಗ್ರಾಮ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು ಪರಾರಿಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.
ತನಿಖೆಯಲ್ಲಿ ಬಹಿರಂಗವಾದ ಅಂಶಗಳು :
ಬಂಧಿತ ಆರೋಪಿ ದೇವಕುಮಾರ್ ಮೃತಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಅವಳ ಹೆಸರಿನಲ್ಲಿ ವಿಮಾ ಪಾಲಿಸಿಗಳನ್ನು ಮಾಡಿಸಿ ತನ್ನ ಹೆಸರನ್ನು ನಾಮಿನಿಯಾಗಿ ನಮೂದಿಸಿದ್ದನು. ಬಳಿಕ ಹಣದ ಬೇಡಿಕೆ ಹಾಗೂ ಸಂಬಂಧ ಬಹಿರಂಗ ಮಾಡುವ ಬೆದರಿಕೆಯ ಹಿನ್ನೆಲೆಯಲ್ಲಿ ಅಪರಾಧಿಕ ಸಂಚು ರೂಪಿಸಲಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು ತುಮಕೂರಿನಿಂದ ಸುಮಿತ್ರರನ್ನು ವಾಹನದಲ್ಲಿ ಕರೆದುಕೊಂಡು ಬಂದು, ಕೋರಾ–ಊರುಕೇರಿ ಸರ್ವೀಸ್ ರಸ್ತೆಯಲ್ಲಿ ಹಲ್ಲೆ ನಡೆಸಿ, ನಂತರ ಹೊಳಲ್ಕೆರೆ ಹೊರವಲಯದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ಜೈಪುರ ಗ್ರಾಮದ ಸ್ನೇಹ ಪಬ್ಲಿಕ್ ಶಾಲೆಯ ಸಮೀಪ ರಸ್ತೆ ಬದಿಯಲ್ಲಿ ಹಾಕಿ ಅಪಘಾತದಂತೆ ತೋರಿಸಲು ಪ್ರಯತ್ನಿಸಲಾಗಿದೆ ಎಂಬುದು ಆರೋಪವಾಗಿದೆ.
ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ :
ಪ್ರಕರಣವನ್ನು ಅತಿ ಕಡಿಮೆ ಅವಧಿಯಲ್ಲಿ ಭೇದಿಸಿದ ವಿಶೇಷ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.












