ಬೆಂಗಳೂರು.ಆಗಸ್ಟ್.3 : ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಕ್ಕಿ ದರ ಸಾರ್ವಕಾಲಿಕ ಏರಿಕೆ ಕಾಣುತ್ತಿದ್ದು, ಪ್ರತಿನಿತ್ಯ ಬಳಸುವ ಪ್ರಮುಖ ಅಕ್ಕಿ ಕೆಜಿಗೆ 100 ರೂಪಾಯಿಯ ಗಡಿ ತಲುಪಿವೆ.
ಕಳೆದ ಕೇವಲ ಮೂರು ವಾರಗಳ ಅವಧಿಯಲ್ಲಿ ಅಕ್ಕಿ ದರದಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಗ್ರಾಹಕರು ಹಾಗೂ ಸಣ್ಣ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಪ್ರಸ್ತುತ ಸ್ಟೀಮ್ ರೈಸ್ ಸಗಟು ದರ 65 ರಿಂದ 70 ರೂಪಾಯಿ ಇದ್ದು, ಚಿಲ್ಲರೆ ಅಂಗಡಿಗಳಲ್ಲಿ 75 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಜನಪ್ರಿಯ ಸೋನಾ ಮಸೂರಿ ಸಗಟು ಮಾರುಕಟ್ಟೆಯಲ್ಲಿ 75 ರಿಂದ 85 ರೂಪಾಯಿಗೆ ಲಭ್ಯವಿದ್ದರೆ, ಚಿಲ್ಲರೆ ದರ 90 ರಿಂದ 95 ರೂಪಾಯಿವರೆಗೆ ಜಿಗಿದಿದೆ. ಇನ್ನು ಜೀರಾ ರೈಸ್ ಚಿಲ್ಲರೆ ದರ 95 ರಿಂದ 100 ರೂಪಾಯಿಯಷ್ಟಾಗಿದೆ. ಸಾರ್ವಜನಿಕರು ದಿನನಿತ್ಯ ಹೆಚ್ಚಾಗಿ ನೆಚ್ಚಿಕೊಳ್ಳುವ ಸೋನಾಮಸೂರಿ ರಾ ರೈಸ್ ಬೆಲೆ ಈಗಾಗಲೇ ಕೆಜಿಗೆ 95 ರೂಪಾಯಿಗೆ ತಲುಪಿದ್ದು, ಶೀಘ್ರದಲ್ಲೇ ಶತಕ ಬಾರಿಸುವ ಲಕ್ಷಣಗಳು ಕಾಣಿಸುತ್ತಿವೆ.
ದಿನೇ ದಿನೇ ಹೆಚ್ಚುತ್ತಿರುವ ಸಗಟು ದರದಿಂದಾಗಿ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗೆ ಉತ್ತರ ನೀಡಲಾಗದೆ ಪರದಾಡುವಂತಾಗಿದೆ. ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲ ಅಂಗಡಿಯವರು ತಮ್ಮ ಲಾಭದ ಪ್ರಮಾಣವನ್ನು ತಗ್ಗಿಸಿಕೊಂಡು ವ್ಯಾಪಾರ ಮಾಡುತ್ತಿದ್ದರೆ, ಇನ್ನು ಕೆಲವರು ಸಗಟು ದರಕ್ಕಿಂತ 10 ರೂಪಾಯಿ ಹೆಚ್ಚುವರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.









