ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು : ಸಚಿವ ಡಿ ಸುಧಾಕರ್

2 Min Read

ಹಿರಿಯೂರು, ಜೂನ್. 12  : ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಉತ್ತಮ ಸಂಸ್ಕಾರ ಕಲಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅಭಿಪ್ರಾಯಪಟ್ಟರು.

ತಾಲೂಕಿನ ಹೊಸಯಳನಾಡು ಗ್ರಾಮದಲ್ಲಿ ಬಾಲಕರ ವಿದ್ಯಾರ್ಥಿ ನಿಲಯದ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ ಹೊಸದಾಗಿ ಮಂಜೂರಾಗಿರುವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ತಾಲೂಕಿನಲ್ಲಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ, ಹಾಸ್ಟೆಲ್ ಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸರ್ಕಾರಿ ಹಾಸ್ಟೆಲ್ ಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಹಾಸ್ಟೆಲ್ ವ್ಯವಸ್ಥೆ ವಿದ್ಯಾರ್ಥಿ ಬದುಕಲ್ಲಿ ಬಹುದೊಡ್ಡ ಆಸರೆಯಾಗುವುದರಿಂದ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹಾಸ್ಟೆಲ್, ಶಾಲಾ ಕಾಲೇಜು, ಶಿಕ್ಷಕರು ಹಾಗೂ ಪೋಷಕರ ಹೆಸರು ಉಳಿಸಬೇಕು ಎಂದರು.

ಶಾಲೆಯ ಮಹಾ ಪೋಷಕ ನಾ. ತಿಪ್ಪೇಸ್ವಾಮಿ ಮಾತನಾಡಿ ಕಳೆದ ಹತ್ತು ಹದಿನೈದು ವರ್ಷಗಳಿಂದ ಸುಮಾರು ಹದಿನೈದು ಕೋಟಿ ಹಣವನ್ನು ಖರ್ಚು ಮಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಹಿಂದುಳಿದವರು ಹಾಗೂ ಬಡವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುಲಾಗಿದೆ. ಈ ಶಾಲೆಯನ್ನು ಬೇರೆ ಶಾಲೆಗೆ ಹೋಲಿಕೆ ಮಾಡಬಾರದು. ಕಾರ್ಪೊರೇಟ್ ಶಾಲೆಗಳಲ್ಲಿ ಸಿಗುವಂತಹ ಎಲ್ಲಾ ಸೌಲಭ್ಯಗಳು ಈ ಶಾಲೆಯಲ್ಲಿ ಸಿಗುವಂತೆ ಅಭಿವೃದ್ಧಿ ಗೊಳಿಸಲಾಗಿದೆ. ಉತ್ತಮವಾದ ವಾತಾವರಣ, ಗಾಳಿ, ಬೆಳಕು, ಪರಿಸರವಿರುವ ಒಂದು ಹೈಟೆಕ್ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನವಾಗಿದೆ. ನುರಿತ ಶಿಕ್ಷಕರ ಭೋಧನೆ ಒಳಗೊಂಡಂತೆ ಅತ್ಯಾಧುನಿಕ ಉತ್ತಮ ಆಟದ ಮೈದಾನ, ಗ್ರಂಥಾಲಯ, ಕಂಪ್ಯೂಟರ್, ಪ್ರಯೋಗಾಲಯ ಸೇರಿದಂತೆ ವಿವಿಧ ಕಲಿಕಾ ಸೌಲಭ್ಯಗಳು ದೊರೆಯುತ್ತಿವೆ. ಕಲಿಕೆಯ ಜೊತೆಗೆ ಒಂದೊಳ್ಳೆ ಆರೋಗ್ಯ ಸಿಗಬೇಕು ಎಂಬ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಕಳೆದ ಆರು ವರ್ಷಗಳಿಂದ ಉಚಿತ ಬಿಸಿಯೂಟ ಕೊಡಲಾಗುತ್ತಿದೆ. ಆಗಾಗ ಶಾಲೆಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಶಾಲೆಯ ಬಗ್ಗೆ ಕ್ಷೇತ್ರದ ಸಚಿವರು ಅಭಿಮಾನ ಇಟ್ಟಿದ್ದಾರೆ. ಕೇಳಿದ್ದು ಇಲ್ಲ ಎನ್ನದೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಕುಮಾರ್ ಮಾತನಾಡಿ ನಮ್ಮ ವ್ಯಾಪ್ತಿಯ ಮರಡಿಹಳ್ಳಿ, ಹೊಸ ಯಳನಾಡು ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡಗಳು ತುಂಬಾ ಹಳೆಯವಾಗಿದ್ದು ಹೊಸ ಕಟ್ಟಡಗಳ ಅವಶ್ಯಕತೆ ಇದೆ. ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯಗಳಿರುವ ಹೊಸ ಕಟ್ಟಡ ನಿರ್ಮಿಸಿಕೊಡಬೇಕು. ತಾಲೂಕು ಕಚೇರಿ ಬಳಿಯ ದೇವರಾಜು ಅರಸು ಭವನದ ಸುತ್ತ ಕಾಂಪೌoಡ್ ನಿರ್ಮಾಣ ಮಾಡಿಕೊಡಬೇಕು. ಇತ್ತೀಚಿನ ದಿನಗಳಲ್ಲಿ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ಹಾಸ್ಟೆಲ್ ನಿರ್ವಹಣೆ ತುಂಬಾ ಕಷ್ಟಕರವಾಗುತ್ತಿದೆ. ಎಷ್ಟೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು ಇಲಾಖೆಯ ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ ತೊಂದರೆ ಹೆಚ್ಚುತ್ತಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷ ತಿಮ್ಮಶೆಟ್ರು, ಪ್ರಾoಶುಪಾಲ, ರಂಗಸ್ವಾಮಿ, ಕೆಪಿಎಸ್ ಮುಖ್ಯ ಶಿಕ್ಷಕ ಈರಣ್ಣ, ಪ್ರೌಢಶಾಲಾ ಶಿಕ್ಷಕ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈರಲಿಂಗೇಗೌಡ,ಖಾದಿ ರಮೇಶ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಕೃಷ್ಣಮೂರ್ತಿ, ಕಂದಿಕೆರೆ ಸುರೇಶ್ ಬಾಬು, ಕಾರ್ಮಿಕ ಪರಿಷತ್ ಅಧ್ಯಕ್ಷ ಪರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ತಿಪ್ಪೇಸ್ವಾಮಿ ಹಾಗೂ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಸೇರಿದಂತೆ ಮತ್ತಿತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks