Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮದುವೆ ವಿಚಾರದ ವೈಮನಸ್ಸು ದುರಂತಕ್ಕೆ ಅಂತ್ಯ; ನಾಡಬಾಂಬ್ ಸ್ಫೋಟಿಸಿ ಯುವಕ ಆತ್ಮಹತ್ಯೆ, ಯುವತಿ ಪಾರು

---Advertisement---

ತುಮಕೂರು, ಜೂ. 28: ಜಿಲ್ಲೆಯ ಶಿರಾ ತಾಲ್ಲೂಕಿನ ಜೋಗಿಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದ ಭೀಕರ ಘಟನೆಯಲ್ಲಿ ಯುವಕನೊಬ್ಬ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ನಾಗೇಂದ್ರ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿದ್ದ ರಮ್ಯಾ ಪರಸ್ಪರ ಪ್ರೀತಿಸುತ್ತಿದ್ದರು.

ಮದುವೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಗೇಂದ್ರ ಶುಕ್ರವಾರ ಬೆಳಿಗ್ಗೆ ಉಬರ್ ಕ್ಯಾಬ್ ಬುಕ್ ಮಾಡಿಕೊಂಡು ಜಯನಗರದ ಸಿದ್ದಾಪುರಕ್ಕೆ ತೆರಳಿದ್ದ. ಅಲ್ಲಿ ಸ್ನೇಹಿತೆಯೊಂದಿಗೆ ವಾಸವಾಗಿದ್ದ ರಮ್ಯಾಳನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಂಕೋಲಾ ಕಡೆಗೆ ಹೊರಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ರಮ್ಯಾಳ ಸ್ನೇಹಿತೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಕಾರು ಸಂಚರಿಸುತ್ತಿದ್ದ ವೇಳೆ ಸಿದ್ದಾಪುರ ಪೊಲೀಸರು ಕ್ಯಾಬ್ ಚಾಲಕನಿಗೆ ಕರೆ ಮಾಡಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದರಿಂದ ಆತಂಕಗೊಂಡ ನಾಗೇಂದ್ರ, ಕಾರಿನಲ್ಲೇ ರಮ್ಯಾಳೊಂದಿಗೆ ಜಗಳವಾಡಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.ಗಾಯಗೊಂಡ ರಮ್ಯಾ ಕಾರಿನಿಂದ ಇಳಿದು ಓಡಿ ಜೀವ ಉಳಿಸಿಕೊಂಡಿದ್ದಾಳೆ. ಈ ವೇಳೆ ಕ್ಯಾಬ್ ಚಾಲಕ ಪ್ರವೀಣ್ ನಾಗೇಂದ್ರನ ಕೈಯಲ್ಲಿದ್ದ ಚಾಕುವನ್ನು ಕಸಿದು ಹೊರಗೆ ಎಸೆದಿದ್ದಾರೆ. ಬಳಿಕ ನಾಗೇಂದ್ರ ಬ್ಯಾಗ್‌ನಲ್ಲಿದ್ದ ನಾಡಬಾಂಬ್ ಅನ್ನು ಹೊತ್ತಿಸಲು ಯತ್ನಿಸಿದಾಗ ಅದನ್ನೂ ಚಾಲಕ ಹೊರಗೆ ಎಸೆದಿದ್ದಾರೆ.
ಆದರೆ ನಾಗೇಂದ್ರ ಮತ್ತೊಂದು ನಾಡಬಾಂಬ್ ತೆಗೆದು ಲೈಟರ್‌ನಿಂದ ಹೊತ್ತಿಸಿದ್ದು, ಕ್ಷಣಾರ್ಧದಲ್ಲೇ ಸ್ಫೋಟ ಸಂಭವಿಸಿ ಆತ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾನೆ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ.

ಚಾಕು ಇರಿತದಿಂದ ತಲೆ ಹಾಗೂ ಕೈಗೆ ಗಾಯಗೊಂಡ ರಮ್ಯಾಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುವತಿ ಹಾಗೂ ಕಾರು ಚಾಲಕರಿಂದ ಮಾಹಿತಿ ಪಡೆದು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ. ಮದುವೆ ವಿಚಾರದ ವೈಮನಸ್ಸೇ ಈ ದುರಂತಕ್ಕೆ ಕಾರಣವಾಗಿರಬಹುದೆಂಬ ಶಂಕೆಯೊಂದಿಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now