ಸುದ್ದಿಒನ್, ಚಿತ್ರದುರ್ಗ, ಜೂನ್. 28 : ಜೀವನದಲ್ಲಿ ಅತ್ಯಂತ ಖುಷಿ ಕೊಡುವ, ಸಮಾಧಾನ ತರುವ ಮತ್ತು ಮನೋವಿಕಾರಗಳನ್ನು ತಡೆಗಟ್ಟುವ ಶಕ್ತಿ ಎಂದರೆ ಅದು ಕ್ರೀಡೆ ಎಂದು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ತಿಳಿಸಿದರು.
ನಗರದ ಎಸ್.ಜೆ.ಎಂ. ಐ.ಟಿ. ಕ್ರೀಡಾ ಮೈದಾನದಲ್ಲಿ ಇಂದು (ಜೂನ್ 28, 2026) ಹಮ್ಮಿಕೊಳ್ಳಲಾಗಿದ್ದ ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಡಾ. ಬಸವಕುಮಾರ ಸ್ವಾಮೀಜಿ ಅವರು, ಬಳಿಕ ತಾವೇ ಖುದ್ದಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ರಂಗು ತುಂಬಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಅವರು ಕೂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ಎಲ್ಲಾ ಕ್ರೀಡಾಪಟುಗಳ ಸಮ್ಮುಖದಲ್ಲಿ ಜ್ಯೋತಿ ಬೆಳಗಿದ ನಂತರ, ಲೆಕ್ಸ್ ಯೂನಿಯನ್ ಪ್ರೆಸಿಡೆಂಟ್ ಸಂದೀಪ್ ಅವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಇದೇ ಸುಸಂದರ್ಭದಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಯಾದ ಮಂಜುನಾಥ್ ಕೆ. ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ದೈಹಿಕ ನಿರ್ದೇಶಕರಾದ ಶ್ರೀಮತಿ ಸುನಿತಾ ಅವರು ನೆರವೇರಿಸಿಕೊಟ್ಟರೆ, ಸಹಾಯಕ ಪ್ರಾಧ್ಯಾಪಕರಾದ ಸ್ಮಿತಾ ಅವರು ಉಪಸ್ಥಿತರಿದ್ದವರನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ಬೋಧಕ ಸಿಬ್ಬಂದಿಯಾದ ಗಿರೀಶ್ ಟಿ.ಎಸ್., ರಮೇಶ್ ಎಂ., ಕರಕಪ್ಪ ಮೇಟಿ, ಮಧು ಎಚ್., ಮಧು ಎಮ್., ರೂಪಾ, ಅಂಬಿಕಾ ಹಾಗೂ ಬೋಧಕೇತರ ಸಿಬ್ಬಂದಿಯಾದ ವೀರಯ್ಯ ಹಿರೇಮಠ, ಅಶೋಕ್ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಕ್ರೀಡಾಪಟುಗಳು ಸಕ್ರಿಯವಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.












