ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 03 : ಕಲ್ಪಿತ ನ್ಯಾಯಾಲಯ ಸ್ಪರ್ಧೆಯಿಂದ ಕಾನೂನು ವಿದ್ಯಾರ್ಥಿಗಳಿಗೆ ಹಾಗೂ ವಕೀಲರಾಗುವವರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೈಕೋರ್ಟ್ ನ್ಯಾಯಾಧೀಶರಾದ ವೆಂಕಟೇಶ್‍ನಾಯ್ಕ ಟಿ. ತಿಳಿಸಿದರು.

ಇಲ್ಲಿನ ಸರಸ್ವತಿ ಕಾನೂನು ಕಾಲೇಜಿನಲ್ಲಿ ಶನಿವಾರ ರಾಷ್ಟ್ರ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಗಾಟಿಸಿ ಮಾತನಾಡಿದರು.
ಇಂತಹ ಸ್ಪರ್ಧೆಗಳಲ್ಲಿ ಕಾನೂನು ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಜ್ಞಾನ ಮತ್ತು ಕೌಶಲ್ಯ ಹೆಚ್ಚುತ್ತದೆ. ಜೊತೆಗೆ ವಕೀಲ ವೃತ್ತಿಯಲ್ಲಿ ತೊಡಗುವವರಿಗೂ ಇದು ನೆರವಾಗಲಿದೆ. 2012 ರಲ್ಲಿ ಪೋಕ್ಸೊ ಕಾಯಿದೆ ಜಾರಿಗೆ ಬಂತು. ಇದರಿಂದ ಮಕ್ಕಳು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುವವರಿಗೆ ಶಿಕ್ಷೆ ವಿಧಿಸಲು ಸಹಕಾರಿಯಾಗಿದೆ. ಎರಡನೆ ಬಾರಿಗೆ ಸರಸ್ವತಿ ಕಾನೂನು ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಏರ್ಪಡಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರಗಳಿಂದ ರಕ್ಷಿಸಲು ಏನೇನು ಕಾಯಿದೆಗಳಿವೆ ಅಪ್ರಾಪ್ತ ಬಾಲಕಿಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯಕ್ಕೆ ಪೋಕ್ಸೋ ಕಾಯಿದೆಯಡಿ ಹೇಗೆ ರಕ್ಷಣೆ ನೀಡಬಹುದು ಎನ್ನುವುದರ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಕಲ್ಪಿತ ನ್ಯಾಯಾಲಯ ಸ್ಪರ್ಧೆಯ ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷರು ಹಾಗೂ ರಾಜ್ಯಸಭೆ ಮಾಜಿ ಸದಸ್ಯರಾದ ಹೆಚ್.ಹನುಮಂತಪ್ಪ ಮಾತನಾಡುತ್ತ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಯಿರಬೇಕು. ಆದರೆ ದ್ವೇಷವಿರಬಾರದು. ಗೆಲ್ಲುವ ಛಲವಿರಬೇಕು. ರಾಜ್ಯದ ವಿವಿಧ ಜಿಲ್ಲೆಗಳ 37 ಕಾಲೇಜುಗಳಿಂದ ಕಾನೂನು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಅತ್ಯಂತ ಸಂತೋಷ ತಂದಿದೆ. ಸ್ಪರ್ಧೆ ಎಂದ ಮೇಲೆ ಗೆಲ್ಲಬೇಕೆಂಬ ಆಸೆಯಿರುತ್ತದೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಸರಸ್ವತಿ ಕಾನೂನು ಕಾಲೇಜು ಉಪಾಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿ ಫಾತ್ಯರಾಜನ್, ಕಾರ್ಯದರ್ಶಿ ಡಿ.ಕೆ.ಶೀಲಾ, ಪ್ರಾಂಶುಪಾಲರಾದ ಪ್ರೊ.ಎಂ.ಎಸ್.ಸುಧಾದೇವಿ ವೇದಿಕೆಯಲ್ಲಿದ್ದರು.
















