Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನ. 15ರೊಳಗೆ ಎಲ್ಲಾ ತಾಲೂಕುಗಳಲ್ಲಿ ಗೋಶಾಲೆ ಆರಂಭಕ್ಕೆ ಕ್ರಮವಹಿಸಿ : ಸಚಿವ ಟಿ.ರಘುಮೂರ್ತಿ ಸೂಚನೆ

---Advertisement---

ಚಿತ್ರದುರ್ಗ. ನ.11 ಇದೇ ನವೆಂಬರ್ 15ರೊಳಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಗೋಶಾಲೆಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲೆಯಲ್ಲಿ ಎಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಿರಿಯೂರು ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಪತ್ತು ನಿರ್ವಹಣಾ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕು ತಹಸೀಲ್ದಾರರು ಮಾಹಿತಿ ನೀಡಿ, ಹಿರಿಯೂರಿನಲ್ಲಿ 3 ಕಡೆ ಗೋಶಾಲೆಗೆ ಸಿದ್ಧತೆ ನಡೆದಿದ್ದು, ಬೇಡಿಕೆ ಹೆಚ್ಚಿರುವ ಕರಿಯಾಲದಲ್ಲಿ ನ.12ಕ್ಕೆ ಆರಂಭಿಸಲಾಗುವುದು. ಚಳ್ಳಕೆರೆ (04), ಮೊಳಕಾಲ್ಮುರು (03), ಚಿತ್ರದುರ್ಗ (04), ಹೊಳಲ್ಕೆರೆ (02) ಹಾಗೂ ಹೊಸದುರ್ಗದಲ್ಲಿ (04) ಗೋಶಾಲೆ ಆರಂಭಕ್ಕೆ ಸಿದ್ಧತೆಗಳು ನಡೆದಿವೆ ಎಂದರು. ಅಲ್ಲದೆ ಚಳ್ಳಕೆರೆ ತಾಲೂಕಿನ 15 ಕಡೆ 2,600 ಮತ್ತು ಮೊಳಕಾಲ್ಮುರು ತಾಲೂಕಿನ 4 ಕಡೆ 574 ದೇವರ ಎತ್ತುಗಳಿದ್ದು, ಅವುಗಳಿಗೆ ಟ್ರಸ್ಟ್ ಆರಂಭಿಸುವಂತೆ ಸಚಿವರು ನಿರ್ದೇಶಿಸಿದರು. ಯಾವುದೇ ಕಾರಣಕ್ಕೂ ಮೇವು ಹಾಗೂ ನೀರಿನ ಕೊರತೆಯ ಬಗ್ಗೆ ದೂರುಗಳು ಬರಬಾರದು. ತಹಸೀಲ್ದಾರರು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಎಚ್ಚರಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲೇ ಹಿರಿಯೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒ ಅವರು ವಿಶೇಷ ಗಮನ ಹರಿಸಬೇಕು. ತಾಲೂಕಿನ 33 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ, ಚರಂಡಿ ಸ್ವಚ್ಛತೆ, ಬೀದಿ ದೀಪ ಹಾಗೂ ಕೂಲಿ ಕೆಲಸ ನೀಡುವ ಕುರಿತು ಸವಿಸ್ತಾರ ಮಾಹಿತಿ ಪಡೆದ ಸಚಿವರು, ಟ್ಯಾಂಕರ್ ಮೂಲಕ ನೀರು ಪೂರೈಸಲು ಯಾವುದೇ ಮಿತಿ ಇಲ್ಲ, ಅಗತ್ಯವಿದ್ದಷ್ಟು ನೀರು ನೀಡಿ ಬಿಲ್ ತಕ್ಷಣ ಪಾವತಿಸಲು ಸೂಚಿಸಿದರು. ಅಧಿಕಾರಿಗಳು ಬರಗಾಲದ ಸಮಯದಲ್ಲಿ ಕಾಟಾಚಾರಕ್ಕೆ ಕೆಲಸ ಮಾಡದೇ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ಪಿಡಿಒಗಳು ಸಾರ್ವಜನಿಕರ ಕರೆಗಳಿಗೆ ತಕ್ಷಣ ಸ್ಪಂದಿಸಬೇಕು. ತಾವೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.

ಜಿ.ಪಂ. ಸಿಇಒ ಡಾ. ಆಕಾಶ್ ಮಾತನಾಡಿ, ಕುಡಿಯುವ ನೀರು ಮತ್ತು ಸ್ವಚ್ಛತೆ ಬಗ್ಗೆ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹರಿಯಬ್ಬೆ ಹಾಗೂ ಮ್ಯಾದನಹೊಳೆ ಗ್ರಾಮಗಳಲ್ಲಿ ನೀರು ಬಳಕೆಗೆ ಯೋಗ್ಯವಿಲ್ಲ ಎಂಬ ವರದಿ ಬಂದಿದ್ದು, ತಕ್ಷಣ ಕ್ರಮಕ್ಕೆ ಸೂಚಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಹರ್ತಿಕೋಟೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಪೂರ್ಣಗೊಳ್ಳಲಿದ್ದು, ಪ್ರಾಯೋಗಿಕವಾಗಿ 37 ಗ್ರಾಮಗಳಿಗೆ ನೀರು ಒದಗಿಸಲಾಗುವುದು ಎಂದರು.

 

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಹಸನ್ ಬಾಷಾ ಮಾತನಾಡಿ, ಹಿರಿಯೂರು ತಾಲೂಕಿನ ದಿಂಡಾವರ, ಗೌಡನಹಳ್ಳಿ, ಜೆ.ಜಿ.ಹಳ್ಳಿ, ಕರಿಯಾಲ, ಯಲ್ಲದಕೆರೆ, ಎಂಡಿಕೋಟೆ ಸೇರಿದಂತೆ 42 ಹಳ್ಳಿಗಳಿಗೆ ಪ್ರಸ್ತುತ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಎಸ್. ರಮ್ಯಾ ಮಾಹಿತಿ ನೀಡಿ, ನವೆಂಬರ್ 1ರಿಂದ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಶೇ. 43ರಷ್ಟು ಮಳೆ ಕೊರತೆಯಿದೆ. ಜಿಲ್ಲೆಯ 443 ಕೆರೆಗಳ ಪೈಕಿ 129 ಕೆರೆಗಳು ಸಂಪೂರ್ಣ ಖಾಲಿಯಾಗಿವೆ. 20 ಕೆರೆಗಳಲ್ಲಿ ಶೇ. 30-40, 20 ಕೆರೆಗಳಲ್ಲಿ ಶೇ. 50ರಷ್ಟು ನೀರಿದ್ದು, ಕೇವಲ 4 ಕೆರೆಗಳು ಭರ್ತಿಯಾಗಿವೆ. ಪ್ರಸ್ತುತ ಹಿರಿಯೂರಿನಲ್ಲಿ 34, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆಯಲ್ಲಿ ತಲಾ 3 ಟ್ಯಾಂಕರ್‌ಗಳಿಂದ ನೀರು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇನ್ನು 11 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾ.ಪಂ. ಪಿಡಿಒಗಳು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now