ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲೇ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಸಿದ್ಧತೆಗಳು ಚುರುಕುಗೊಂಡಿದ್ದು, ಚುನಾವಣಾಧಿಕಾರಿ (RO) ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು (ARO) ನಿಯಮಾನುಸಾರ ನೇಮಕ ಮಾಡಲು ರಾಜ್ಯ ಚುನಾವಣಾ ಆಯೋಗವು ಎಲ್ಲ ಜಿಲ್ಲಾಧಿಕಾರಿಗಳಿಗೆ ಅಧಿಕೃತ ನಿರ್ದೇಶನ ನೀಡಿದೆ.
ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ ನಿಯಮ 6 ರನ್ವಯ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ನವೆಂಬರ್ 16, 2026ರ ಒಳಗೆ ಪ್ರಸ್ತಾವನೆಯನ್ನು ಆಯೋಗದ ಅನುಮೋದನೆಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ನೇಮಕಾತಿ ನಿಯಮಗಳು ಹಾಗೂ ಮಾರ್ಗಸೂಚಿಗಳು
ಜಿಲ್ಲಾ ಪಂಚಾಯತ್:
ತಾಲ್ಲೂಕು ವ್ಯಾಪ್ತಿಯಲ್ಲಿರುವ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಒಬ್ಬ ಉಪ ವಿಭಾಗಾಧಿಕಾರಿ (AC) ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಬೇಕು.
ತಾಲ್ಲೂಕಿನಲ್ಲಿ 10ಕ್ಕಿಂತ ಹೆಚ್ಚಿನ ಕ್ಷೇತ್ರಗಳಿದ್ದರೆ ಇಬ್ಬರು ಚುನಾವಣಾಧಿಕಾರಿಗಳನ್ನು ನೇಮಿಸಬಹುದು.

ಇವರಿಗೆ ಸಹಾಯಕರಾಗಿ (ತಾಲ್ಲೂಕು ತಹಶೀಲ್ದಾರರನ್ನು ಹೊರತುಪಡಿಸಿ) ತಹಶೀಲ್ದಾರ್ ಹುದ್ದೆಗೆ ತತ್ಸಮಾನವಾದ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಬೇಕು.
ತಾಲ್ಲೂಕು ಪಂಚಾಯತ್:
ಸರಾಸರಿ 15 ಕ್ಷೇತ್ರಗಳಿಗೆ ಒಬ್ಬರಂತೆ ತಹಶೀಲ್ದಾರ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ಗುರುತಿಸಬೇಕು.

ಪ್ರತಿ ಚುನಾವಣಾಧಿಕಾರಿಗೆ ಒಬ್ಬ ಉಪ ತಹಶೀಲ್ದಾರ್ ಅಥವಾ ತತ್ಸಮಾನ ಶ್ರೇಣಿಯ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನಿಯೋಜಿಸಬೇಕು.
ವಿಶೇಷ ಸೂಚನೆಗಳು:
ಅಧಿಕಾರಿಗಳ ನೇಮಕಾತಿ ಆದೇಶವನ್ನು ಅವರ ವೈಯಕ್ತಿಕ ಹೆಸರಿನ ಬದಲು ಹುದ್ದೆಯ ಪದನಾಮದ (Designation) ಆಧಾರದ ಮೇಲೆ ಹೊರಡಿಸಬೇಕು.

ಉಪ ವಿಭಾಗಾಧಿಕಾರಿಗಳನ್ನು ಆಯಾ ಉಪ ವಿಭಾಗ ಕೇಂದ್ರಸ್ಥಾನದ ಜಿ.ಪಂ. ಕ್ಷೇತ್ರಗಳಿಗೆ ಹಾಗೂ ತಾಲ್ಲೂಕು ತಹಶೀಲ್ದಾರರನ್ನು ತಾಲ್ಲೂಕು ಕೇಂದ್ರಸ್ಥಾನದ ತಾ.ಪಂ. ಕ್ಷೇತ್ರಗಳಿಗೆ ಕಡ್ಡಾಯವಾಗಿ ನೇಮಿಸಬೇಕು.
ಚುನಾವಣಾ ಕಾರ್ಯದಲ್ಲಿ ಅನುಭವ ಹೊಂದಿರುವ ಇತರ ಅಧಿಕಾರಿಗಳಿಗೆ ಆದ್ಯತೆ ನೀಡಬೇಕು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಏಕಕಾಲದಲ್ಲಿ ನಡೆಯುವುದರಿಂದ, ಪ್ರಕ್ರಿಯೆ ಆರಂಭದಿಂದ ಮುಕ್ತಾಯದವರೆಗಿನ ಎಲ್ಲ ಹಂತಗಳ ಕುರಿತು ನೇಮಕಗೊಂಡ ಅಧಿಕಾರಿಗಳಿಗೆ ಆಯಾ ಜಿಲ್ಲಾಧಿಕಾರಿಗಳು ಸಮಗ್ರ ತರಬೇತಿ ನೀಡಬೇಕು.

ಚುನಾವಣೆಯನ್ನು ಆದಷ್ಟು ಬೇಗ ನಡೆಸಬೇಕಾಗಿರುವುದರಿಂದ ಯಾವುದೇ ವಿಳಂಬವಿಲ್ಲದೆ ನವೆಂಬರ್ 16, 2026ರೊಳಗೆ ಪಟ್ಟಿಯನ್ನು ಅನುಮೋದನೆಗೆ ಸಲ್ಲಿಸಬೇಕು. ಒಮ್ಮೆ ಆಯೋಗದಿಂದ ಅನುಮೋದನೆಗೊಂಡ ಅಧಿಕಾರಿಗಳನ್ನು ಪೂರ್ವಾನುಮತಿಯಿಲ್ಲದೆ ಬದಲಾಯಿಸುವಂತಿಲ್ಲ ಎಂದು ಆಯೋಗದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ










