Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ: ರಾಷ್ಟ್ರೀಯ ಜಯಂತಿಯಾಗಿ ಘೋಷಿಸಲು ಆಗ್ರಹ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 26 : ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಕೋಮುವಾದಿ ಬಿಜೆಪಿಗೆ ರಾಮಾಯಣದ ಮೂಲಕ ರಾಮನನ್ನು ವಿಶ್ವಕ್ಕೆ ಪರಿಚಯಿಸಿರುವ ವಾಲ್ಮೀಕಿ ಏಕೆ ನೆನಪಾಗುತ್ತಿಲ್ಲವೆಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ಮಂಜುನಾಥ್ ಪ್ರಶ್ನಿಸಿದರು.?

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಚರಿಸಲಾದ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಕಾಡಿನಲ್ಲಿ ಭೇಟೆಯಾಡಿಕೊಂಡಿದ್ದ ವಾಲ್ಮೀಕಿ ಮನಃಪರಿವರ್ತನೆಗೊಂಡು ತಪಸ್ಸಿಗೆ ಕುಳಿತಾದ ಅವರ ಮೈಮೇಲೆ ಹುತ್ತ ಬೆಳೆಯುತ್ತದೆ. ರಾಮನ ಆದರ್ಶಗಳನ್ನು ರಾಮಾಯಣದ ಮೂಲಕ ವಾಲ್ಮೀಕಿ ಪರಿಚಯಿಸದಿದ್ದರೆ ರಾಮ ಯಾರು ಎಂಬುದೇ ಗೊತ್ತಾಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ವಾಲ್ಮೀಕಿ ಜಯಂತಿ ರಾಷ್ಟ್ರೀಯ ಜಯಂತಿಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಕೇವಲ ನಾಯಕ ಜನಾಂಗಕ್ಕಷ್ಟೆ ವಾಲ್ಮೀಕಿ ರಾಮಾಯಣ ಬರೆದಿಲ್ಲ. ಇಡಿ ಮನುಕುಲಕ್ಕೆ ನೀಡಿರುವ ಸಂದೇಶ ಎಲ್ಲಾ ಜಾತಿ ಧರ್ಮದವರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ರಾಮಾಯಣ ಬರೆದವರು ವಾಲ್ಮೀಕಿ ಎನ್ನುವುದು ಎಷ್ಟು ಮುಖ್ಯವೋ ಅದರಂತೆ ನಮ್ಮದು ಸೂಫಿ, ಸಂತರು, ಋಷಿ ಮುನಿಗಳ ನಾಡು ಎನ್ನುವುದನ್ನು ಮರೆಯುವಂತಿಲ್ಲ. ಶ್ರೇಷ್ಟ ಗ್ರಂಥ ರಾಮಾಯಣದ ಮೂಲಕ ವಾಲ್ಮೀಕಿ ರಾಮನ ಆದರ್ಶಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ಯವರಂತೆ ಕಾಂಗ್ರೆಸ್ ಎಂದಿಗೂ ಸಮಾಜದಲ್ಲಿ ಒಡಕುಂಟು ಮಾಡುವ ಕೆಲಸಕ್ಕೆ ಕೈಹಾಕಿಲ್ಲ. ಧರ್ಮ, ಜಾತಿ, ಸೂಫಿ ಸಂತರ ಹೆಸರುಗಳನ್ನು ಮುಂದಿಟ್ಟುಕೊಂಡು ದ್ವೇಷ ಹರಡಬಾರದು. ರಾಮನ ಆದರ್ಶ, ವಾಲ್ಮೀಕಿರವರ ತತ್ವ ಸಿದ್ದಾಂತಗಳ ಮೇಲೆ ಕಾಂಗ್ರೆಸ್ ಪಕ್ಷ ನಡೆಯುತ್ತಿದೆ. ರಾಮಾಯಣದ ಆಧಾರದ ಮೇಲೆ ಸಂವಿಧಾನ ರಚನೆಯಾಗಿದೆ ಎಂದರು.

ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್ ಮಾತನಾಡುತ್ತ ವಾಲ್ಮೀಕಿ ಎಂದ ಕೂಡಲೆ ಎಲ್ಲರಿಗೂ ರಾಮಾಯಣ ನೆನಪಾಗುತ್ತದೆ. ಕಾಡಿನಲ್ಲಿ ಭೇಟೆಯಾಡಿಕೊಂಡಿದ್ದ ವಾಲ್ಮೀಕಿ ಮನಃಪರಿವರ್ತನೆಗೊಂಡು ತಪಸ್ಸಿಗೆ ಕೂರುತ್ತಾರೆ. ಇದರಿಂದ ರಾಮಾಯಣ ಬರೆಯಲು ಸಾಧ್ಯವಾಯಿತು. ವಾಲ್ಮೀಕಿಯನ್ನು ಬಿಟ್ಟು ಬಿಜೆಪಿ. ಆರ್.ಎಸ್.ಎಸ್.ನವರು ರಾಮನನ್ನು ಹಿಡಿದುಕೊಂಡು ರಾಜಕಾರಣ ಮಾಡುತ್ತ ರಾಮರಾಜ್ಯದ ಬದಲಿಗೆ ರಾವಣ ರಾಜ್ಯವನ್ನಾಗಿಸಲು ಹೊರಟಿರುವುದು ದುಃಖದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ಬುದ್ದ, ಬಸವ, ಅಂಬೇಡ್ಕರ್ ತತ್ವದಂತೆ ರಾಮಾಯಣ ಬರೆದಿರುವ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕು. ಭೇಟೆಗಾರನಾಗಿದ್ದ ವಾಲ್ಮೀಕಿ ಮಾರ್ಪಾಡಾಗಿ ರಾಮಾಯಣ ರಚಿಸಿರುವುದನ್ನು ನೋಡಿದರೆ ಕೆಟ್ಟವರು ಒಳ್ಳೆಯರಾಗಬಹುದು ಎನ್ನುವುದಕ್ಕೆ ನಿದರ್ಶನ. ರಾಮನ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿನಂತಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡುತ್ತ ಶ್ರೇಷ್ಟ ಸಂತ ವಾಲ್ಮೀಕಿ ಬರೆದಿರುವ ರಾಮಾಯಣದ ತಿರುಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ಮಹಾನ್ ಪುರುಷ ವಾಲ್ಮೀಕಿ ಎಲ್ಲೆಡೆ ಬೆಳಕಿಗೆ ಬರಬೇಕಾದರೆ ವಾಲ್ಮೀಕಿ ಜಯಂತಿಯನ್ನು ಸಡಗರ ಸಂಭ್ರಮಗಳಿಂದ ಆಚರಿಸುವಂತಾಗಬೇಕೆಂದು ನುಡಿದರು.

ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಎದುರು ವಾಲ್ಮೀಕಿ ಪ್ರತಿಮೆಯನ್ನು ಪ್ರತಿಷ್ಟಾಪಿಸಿದರು. ಕಾಡಿನಲ್ಲಿ ವಾಸಿಸುತ್ತಿದ್ದ ವಾಲ್ಮೀಕಿ ರಾಮಾಯಣ ಬರೆದಿರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಪದವೀಧರ ವಿಭಾಗದ ಅಧ್ಯಕ್ಷ ಪ್ರಕಾಶ್‍ರಾಮನಾಯ್ಕ ಮ್ಯಾಕ್ಲುರಹಳ್ಳಿ ತಿಮ್ಮಣ್ಣ, ಕಣ್ಮೇಶ್, ಸಚಿನ್, ನ್ಯಾಯವಾದಿ ಮಹಮದ್ ರಫಿ, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮದ್ ಆಜಾಂ
ಬಸವರಾಜ್ ಬಚ್ಚಬೋರನಹಟ್ಟಿ, ಪಾಪಯ್ಯ, ರವಿ, ಮಂಜುನಾಥ್, ನಗರ ಆಶ್ರಯ ಕಮಿಟಿ ಸದಸ್ಯ ಉಮೇಶ್‍ಕುಮಾರ್, ಗ್ಯಾರೆಂಟಿ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ ಇನ್ನು ಅನೇಕರು ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now