ಢಾಕಾ : ಬಾಂಗ್ಲಾದೇಶದ ಕಾಕ್ಸ್ ಬಜಾರ್ ಜಿಲ್ಲೆಯ ಉಖಿಯಾದಲ್ಲಿರುವ ಕಡಲತೀರದ ಪ್ರಸಿದ್ಧ ರೆಸಾರ್ಟ್ ಒಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಕನಿಷ್ಠ 10 ಮಂದಿ ಸಜೀವ ದಹನವಾಗಿದ್ದಾರೆ.
ಬಿದಿರು ಮತ್ತು ಮರದಿಂದ ನಿರ್ಮಿಸಲಾಗಿದ್ದ ಮೂರು ಅಂತಸ್ತಿನ ‘ತುಪ್ತುಪ್ ರೆಸ್ಟೋ ಆಂಡ್ ರೆಸಾರ್ಟ್’ನಲ್ಲಿ ಬೆಳಿಗ್ಗೆ ಸುಮಾರು 7.25ರ ವೇಳೆಗೆ ಈ ದುರಂತ ಸಂಭವಿಸಿದೆ. ಬೆಂಕಿಯ ಜ್ವಾಲೆ ಕ್ಷಣಾರ್ಧದಲ್ಲಿ ಇಡೀ ಕಟ್ಟಡವನ್ನು ಆವರಿಸಿಕೊಂಡ ಪರಿಣಾಮ ರೆಸಾರ್ಟ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಗಾಯಗೊಂಡ ಒಂಬತ್ತು ಜನರನ್ನು ಕಾಕ್ಸ್ ಬಜಾರ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಮುಂದುವರಿದಿದೆ.
ಎರಡನೇ ಮಹಡಿಯಿಂದ ಜಿಗಿದು ಬದುಕುಳಿದ ವ್ಯಕ್ತಿ, ಪತ್ನಿ ಸೇರಿ ಆರು ಕುಟುಂಬಸ್ಥರ ಸಾವು
ಕುಟುಂಬ ಸಮೇತ ರಜೆ ಕಳೆಯಲು ರೆಸಾರ್ಟ್ಗೆ ಬಂದಿದ್ದ ಆಶಿಕುಲ್ ಇಸ್ಲಾಂ ಎಂಬುವವರು ಬೆಂಕಿ ಆವರಿಸಿದಾಗ ಎರಡನೇ ಮಹಡಿಯಿಂದ ಕೆಳಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅವರ ಪತ್ನಿ ಇಶ್ರತ್ ಜಹಾನ್ ಮಲಿಹಾ ಸೇರಿದಂತೆ ಕುಟುಂಬದ ಆರು ಸದಸ್ಯರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರನ್ನು ಮಲಿಹಾ (30), ಮಿಲಿತಾ ಮೆಹಜಾಬೀನ್ ಅಲ್ವಿ (23), ಲೈಲಾ ಜಹಾನ್ ನಬಿಲಾ (27), ನಫಿಸ್ತಾ ಮೀಮ್ (27), ಫರಿಹಾ ಕಬೀರ್ (33) ಮತ್ತು ಐದು ವರ್ಷದ ಬಾಲಕ ಫೈಜಾನ್ ಅಹ್ಮದ್ ಎಂದು ಗುರುತಿಸಲಾಗಿದೆ. ಉಳಿದ ನಾಲ್ವರು ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ವಿಭಾಗದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ದುರಂತ ಸಂಭವಿಸಿದ ರೆಸಾರ್ಟ್ಗೆ ಅಗ್ನಿ ಸುರಕ್ಷತಾ ಪರವಾನಗಿ ಇರಲಿಲ್ಲ ಎಂಬ ಆಘಾತಕಾರಿ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಕಳೆದ ಜೂನ್ ತಿಂಗಳಲ್ಲಿ ನಡೆದ ತಪಾಸಣೆಯ ವೇಳೆ ಈ ನಿಯಮ ಉಲ್ಲಂಘನೆಯನ್ನು ಗುರುತಿಸಿ ಎಚ್ಚರಿಕೆ ನೀಡಲಾಗಿತ್ತು ಎಂದು ಅಗ್ನಿಶಾಮಕ ಇಲಾಖೆಯ ನಿರ್ದೇಶಕ ಸುಲ್ತಾನುಲ್ ಅಫ್ರೀನ್ ಜುನೈದ್ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ರೆಸಾರ್ಟ್ನಲ್ಲಿ ಸುಮಾರು 30 ಜನರಿದ್ದರು ಎಂದು ವರದಿಯಾಗಿದ್ದು, ಕೇವಲ ನಾಲ್ಕೈದು ಜನರು ಮಾತ್ರ ಪಾರಾಗಲು ಸಾಧ್ಯವಾಯಿತು. ಉಳಿದವರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ರೆಸಾರ್ಟ್ನ ಅಡುಗೆ ಕೋಣೆಯಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದರೂ, ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಕಾಕ್ಸ್ ಬಜಾರ್ ಡೆಪ್ಯುಟಿ ಕಮಿಷನರ್ ಎ. ಮನ್ನನ್ ತಿಳಿಸಿದ್ದಾರೆ. ಬೆಂಕಿ ಅವಘಡದ ಸಂಪೂರ್ಣ ತನಿಖೆಗೆ ಆದೇಶಿಸಲಾಗಿದ್ದು, ಸಮಗ್ರ ವಿಚಾರಣೆಯ ನಂತರವೇ ಅಗ್ನಿ ದುರಂತಕ್ಕೆ ನಿಜವಾದ ಕಾರಣ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.












