ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 17 : ಎಸ್.ಐ.ಆರ್. ಪ್ರಕ್ರಿಯೆ ರದ್ದುಗೊಳಿಸಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯಿಂದ ಶನಿವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ನೆಪದಲ್ಲಿ ನೈಜ ಮತದಾರರನ್ನು ಮತ ಪಟ್ಟಿಯಿಂದ ಡಿಲಿಟ್ ಮಾಡುವುದು ಎಸ್.ಐ.ಆರ್.ಉದ್ದೇಶವೆನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕರ್ನಾಟಕದಲ್ಲಿ ಒಂದು ಕೋಟಿಗೂ ಹೆಚ್ಚು ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. 2025 ರ ಮತಪಟ್ಟಿಯಂತೆ
ಚುನಾವಣೆ ನಡೆಯಬೇಕು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ. ಎಸ್.ಐ.ಆರ್.ನಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿರುವುದರಿಂದ
ಎಸ್.ಐ.ಆರ್. ಬೇಡವೆ ಬೇಡ ಎಂದು ಒತ್ತಾಯಿಸಿದರು.
ಬೀದಿ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಎಸ್.ಐ.ಆರ್.ನಿಂದ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಫಾರಂ ನಂ.6 ರ ಮೂಲಕ ಮತದಾರರ ಹೆಸರುಗಳು ಮತ ಪಟ್ಟಿಗೆ ಸೇರ್ಪಡೆಯಾಗುತ್ತಿಲ್ಲ. ಫಾರಂ ನಂ. 7 ನ್ನು ಸಲ್ಲಿಸಿ ಅರ್ಹ ಮತದಾರರನ್ನು ಮತ ಪಟ್ಟಿಯಿಂದ ಡಿಲಿಟ್ ಮಾಡಿಸುವ ಕುತಂತ್ರ ನಡೆಸುತ್ತಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಂಡು ನೈಜ ಮತದಾರರನ್ನು ಮತ ಪಟ್ಟಿಯಲ್ಲಿ ಉಳಿಸಬೇಕೆಂದು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.
ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಅನ್ನಪೂರ್ಣಮ್ಮ, ಸಂಘಟನಾ ಸಂಚಾಲಕಿ ಸುಧಾ ಡಿ, ದೇವಮ್ಮ, ನೀಲಮ್ಮ, ಉಮಾದೇವಿ, ಗುರುಪಾದಮ್ಮ, ಅನಿತ ಹಾಗೂ ಪ್ರಭಾ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.












