ದಾವಣಗೆರೆ : ಸಾರ್ವಜನಿಕರಲ್ಲಿ ಹೆಚ್ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಐಇಸಿ ವಿಭಾಗದ ಉಪನಿರ್ದೇಶಕರಾದ ಡಾ.ಗೋವಿಂದರಾಜು ಅವರು ಅಭಿಪ್ರಾಯಪಟ್ಟರು.
ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಚಿಗಟೇರಿ ಜಿಲ್ಲಾಸ್ಪತ್ರೆ ವಿವಿಧ ಇಲಾಖೆಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ‘ಮೆಗಾ ರೆಡ್ ರಿಬ್ಬನ್ ಮ್ಯಾರಥಾನ್ ಸ್ಪರ್ಧೆ-2026’ ಕಾರ್ಯಕ್ರಮವನ್ನು ಉದ್ಪಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಹೆಚ್ಐವಿ ಸೋಂಕು ತಡೆಗಟ್ಟುವಿಕೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 17 ವಯಸ್ಸು ದಾಟಿದ ಹಾಗೂ 25 ವರ್ಷದ ಒಳಗಿನ ಯುವಕ-ಯುವತಿಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಯುವ ಜನತೆಯಲ್ಲಿ ಎಚ್ಐವಿ ಏಡ್ಸ್ ಕುರಿತು ಸರಿಯಾದ ವೈಜ್ಞಾನಿಕ ಮಾಹಿತಿ ನೀಡುವುದು ಹಾಗೂ ಸೋಂಕಿನಿಂದ ದೂರವಿರುವಂತೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
95-95-95 ಗೋಲ್ ಎಂಬ ಮೂರು ಪ್ರಮುಖ ಗುರಿಗಳನ್ನು ಒಳಗೊಂಡ ಈ ಕಾರ್ಯಕ್ರಮವು ಮೊದಲ 95 ರಲ್ಲಿ ಜನಸಂಖ್ಯೆಯಲ್ಲಿ ಹೆಚ್ಐವಿ ಸೋಂಕಿತರಾಗಿರುವ ಶೇ. 95ರಷ್ಟು ಜನರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸುವುದು. ಎರಡನೇ 95 ರಲ್ಲಿ ಸೋಂಕು ಇರುವುದು ದೃಢಪಟ್ಟವರಿಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಎ.ಆರ್.ಟಿ ಚಿಕಿತ್ಸೆ ನೀಡುವುದು ಹಾಗೂ ಮೂರನೇ 95 ರಲ್ಲಿ ವೈರಲ್ ಲೋಡ್ ಅನ್ನು ಸಾವಿರಕ್ಕಿಂತ ಹೆಚ್ಚಾಗದಂತೆ ತಡೆದು, ಸೋಂಕು ಇತರರಿಗೆ ಹರಡದಂತೆ ನಿಯಂತ್ರಿಸುವುದು ಆಗಿದೆ ಎಂದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ವತಿಯಿಂದ ಕೌನ್ಸಿಲಿಂಗ್, ಟೆಸ್ಟಿಂಗ್, ಚಿಕಿತ್ಸೆ ಮತ್ತು ಸಾಮಾಜಿಕ ಸೌಲಭ್ಯಗಳು ಸಂಪೂರ್ಣ ಉಚಿತವಾಗಿ ದೊರೆಯುತ್ತಿವೆ. ಹೆಚ್ಐವಿ ಸೋಂಕಿತ ವ್ಯಕ್ತಿಗಳಿಗೆ ಯಾವುದೇ ರೀತಿಯ ತಾರತಮ್ಯ ಅಥವಾ ಅವಮಾನ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕೆ 2 ವರ್ಷ ಜೈಲು ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸುವ ಅವಕಾಶವಿದೆ. ಸಮಾಜದಲ್ಲಿ ಹೆಚ್ಐವಿ ಕುರಿತು ಇರುವ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಸೋಂಕಿತರೊಂದಿಗೆ ಮುಕ್ತವಾಗಿರಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಾದ್ಯಂತ ಶಾಲಾ ಕಾಲೇಜುಗಳಲ್ಲಿ ವಿವಿಧ ಜಾಗೃತಿ ಚಟುವಟಿಕೆಗಳು ಹಾಗೂ ‘ಸುಮಿ’ ಎಂಬ ಸ್ಪರ್ಧೆಗಳ ಮೂಲಕ ಯುವ ಜನತೆಯಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಚಿಗಟೇರಿ ಆಸ್ಪತ್ರೆಯವರಿಗೆ ‘ಮೆಗಾ ರೆಡ್ ರಿಬ್ಬನ್ ಮ್ಯಾರಥಾನ್ ಸ್ಪರ್ಧೆ-2026’ ಸ್ಪರ್ಧೇಯನ್ನು ಏರ್ಪಡಿಸಲಾಗಿದ್ದು, ಸ್ಪರ್ಧೇಯಲ್ಲಿ ಬಾಲಕರ ವಿಭಾಗದಿಂದ ಉಡುಪಿಯ ಬಾಲು ಹೆಗ್ರೆ ಪ್ರಥಮ ಸ್ಥಾನ, ಮೈಸೂರಿನ ಪುರುಷೋತ್ತಮ ದ್ವಿತೀಯ ಸ್ಥಾನ , ಉಡುಪಿಯ ಚನ್ನಬಸವ ಅವರು ತೃತೀಯ ಸ್ಥಾನ ಹಾಗೂ ಹರೀಶ್, ಪ್ರಕಾಶ್, ಪ್ರತೀಕ್ ಅವರು ಸಮಾಧಾನಕರ ಬಹುಮಾನ ಮತ್ತು ಬಾಲಕಿಯರ ವಿಭಾಗದಲ್ಲಿ ಉಡುಪಿಯ ನಂದಿನಿ ಪ್ರಥಮ ಸ್ಥಾನ, ದಕ್ಷಿಣ ಕನ್ನಡದ ಶ್ರೇಯಾ ದ್ವಿತೀಯ ಸ್ಥಾನ , ಉಡುಪಿಯ ದೀಕ್ಷಿತ್ ತೃತೀಯ ಸ್ಥಾನ ಅಶ್ವಿನಿ , ಐಸಿರಿ ಮತ್ತು ಬಿಂದು ಸಮಾಧಾನಕರ ಬಹುಮಾನ ಪಡೆದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಧು ಕೆ.ಎಸ್. , ಅಧೀಕ್ಷಕರಾದ ಡಾ. ನಾಗೇಂದ್ರಪ್ಪ ಎಂ. ,ಡಾ.ಮುರಳೀಧರ್ , ಡಾ.ನಂಜೇಗೌಡ, ಡಾ.ಪಂಪಾಪತಿ, ದಾವಣಗೆರೆ ಪ್ರಥಮ ದರ್ಜೆ ಕಾಲೇಜಿನ ಲೋಕೇಶ್ ನಾಯಕ್ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು ಇತರರು ಉಪಸ್ಥಿತರಿದ್ದರು.












