ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 17 : ನಗರದ ಹೊರ ವಲಯ ದಾವಣಗೆರೆ ರಸ್ತೆಯಲ್ಲಿರುವ ಛಲವಾದಿ ಗುರುಪೀಠದಲ್ಲಿ ಪ್ರತಿ ತಿಂಗಳು ಮೂರನೆ ಶನಿವಾರದಂದು ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದೆಂದು ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ತಿಳಿಸಿದರು.
ಆರೋಗ್ಯ ತಪಾಸಣೆಯುಳ್ಳ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಬಸವನಾಗಿದೇವಸ್ವಾಮೀಜಿ ರಕ್ತ ತಪಾಸಣೆ ಸೇರಿದಂತೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯದ ತೊಂದರೆ ಹೀಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಬಸವೇಶ್ವರ ಆಸ್ಪತ್ರೆಯ ವೈದ್ಯರು, ಆಯುರ್ವೇದಿಕ್ ವೈದ್ಯರು ಹಾಗೂ ಯೋಗ ವನ ಬೆಟ್ಟದ ಪಾರಂಪರಿಕ ವೈದ್ಯರುಗಳು ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡುತ್ತಾರೆ.
ಸಾರ್ವಜನಿಕರು ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಳ್ಳಬಹುದೆಂದು ಬಸವನಾಗಿದೇವಸ್ವಾಮಿ ಮನವಿ ಮಾಡಿದರು.
ಛಲವಾದಿ ಗುರುಪೀಠದ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಮೋಹನ್ ಮಾತನಾಡಿ ಒತ್ತಡ ಬದುಕಿನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುವುದು ಸಹಜ. ಇಂತಹ ಆರೋಗ್ಯ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಂಡು ಏನಾದರೂ ಸಮಸ್ಯೆಗಳಿದ್ದರೆ ವೈದ್ಯರುಗಳು ನೀಡುವ ಸೂಚನೆಯಂತೆ ಚಿಕಿತ್ಸೆ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಜನತೆಯಲ್ಲಿ ವಿನಂತಿಸಿದರು. ನ್ಯಾಯವಾದಿ ಪರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.











