Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ‘ಕರ್ತವ್ಯ’ ಆ್ಯಪ್ ಮೂಲಕ ಸ್ವಯಂಚಾಲಿತ ಮುಟ್ಟಿನ ರಜೆ ಮಂಜೂರು:  ಸರ್ಕಾರ ಆದೇಶ

---Advertisement---

ಬೆಂಗಳೂರು: ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ ನೀಡಲಾಗುವ ಮಾಸಿಕ ಮುಟ್ಟಿನ ರಜೆಯನ್ನು ಇನ್ನು ಮುಂದೆ ‘ಕರ್ತವ್ಯ’ ಆ್ಯಪ್ ಮೂಲಕ ಸ್ವಯಂಚಾಲಿತವಾಗಿ ಮಂಜೂರು ಮಾಡಲು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಪ್ರಜಾಸೇವಾ ಇಲಾಖೆ) ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.

ಸರ್ಕಾರವು ಈಗಾಗಲೇ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ರಜೆಯನ್ನು ಮಂಜೂರು ಮಾಡಿತ್ತು. ಆದರೆ, ಹಲವು ಕಚೇರಿಗಳಲ್ಲಿ ಅಧಿಕಾರಿಗಳು ಈ ರಜೆ ಹಿಂದೆ ಲಭ್ಯವಿರಲಿಲ್ಲವೆಂಬ ಕಾರಣ ನೀಡಿ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು ಹಾಗೂ ನೌಕರರನ್ನು ಪ್ರಶ್ನಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲದೆ ಈ ಸೌಲಭ್ಯ ಕಲ್ಪಿಸಿರುವುದರಿಂದ, ನಿಗದಿತ ಷರತ್ತುಗಳನ್ನು ಪೂರೈಸುವ ಅರ್ಜಿಗಳನ್ನು ತಕ್ಷಣ ಮಂಜೂರು ಮಾಡಬೇಕು ಮತ್ತು ಇಂತಹ ಅರ್ಜಿಗಳನ್ನು ತಿರಸ್ಕರಿಸುವ ವಿವೇಚನಾಧಿಕಾರ ಮಂಜೂರಾತಿ ಪ್ರಾಧಿಕಾರಕ್ಕೆ ಇರುವುದಿಲ್ಲ ಎಂದು ಸುತ್ತೋಲೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಅನುಮೋದನೆಯಂತೆ, ಮಹಿಳಾ ನೌಕರರು ಇನ್ನು ಮುಂದೆ ಮುಟ್ಟಿನ ರಜೆಗೆ ಅರ್ಜಿ ಸಲ್ಲಿಸಿದಾಗ, ಮಂಜೂರಾತಿ ಅಧಿಕಾರಿಯ ಅನುಮೋದನೆಗೆ ಕಾಯದೆ ಆ್ಯಪ್ ಮೂಲಕವೇ ರಜೆ ಸ್ವಯಂಚಾಲಿತವಾಗಿ (ಆಟೋ-ಅಪ್ರೂವಲ್) ಮಂಜೂರಾಗುವಂತೆ ಬದಲಾವಣೆ ತರಲಾಗಿದೆ.

ಈ ಸೌಲಭ್ಯವನ್ನು 18 ರಿಂದ 52 ವರ್ಷ ವಯೋಮಿತಿಯ ಮಹಿಳಾ ಸರ್ಕಾರಿ ನೌಕರರು ಪಡೆಯಬಹುದಾಗಿದ್ದು, ತಿಂಗಳಿಗೆ ಗರಿಷ್ಠ ಒಂದು ದಿನ ಮಾತ್ರ ರಜೆ ಲಭ್ಯವಿರಲಿದೆ. ಅಲ್ಲದೆ, ಈ ರಜೆಯನ್ನು ಮುಂದಿನ ತಿಂಗಳಿಗೆ ಕೊಂಡೊಯ್ಯಲು (ಸಂಚಯಿಸಲು) ಅಥವಾ ಇತರ ರಜೆಗಳೊಂದಿಗೆ ಸೇರಿಸಿ ಪಡೆಯಲು ಅವಕಾಶವಿರುವುದಿಲ್ಲ. ಮಹಿಳಾ ಸಿಬ್ಬಂದಿ ಮುಟ್ಟಿನ ರಜೆಗೆ ‘ಕರ್ತವ್ಯ’ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಆ್ಯಪ್ ಮೂಲಕ ಮಂಜೂರಾದ ರಜೆಯನ್ನು ಯಾವುದೇ ಅಧಿಕಾರಿ ತಡೆಹಿಡಿಯದಂತೆ ಅಥವಾ ರದ್ದುಪಡಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.

Join WhatsApp

Join Now

Join Telegram

Join Now