Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭದ್ರೆಗೆ ಸ್ವಾಗತ, ಸಮಗ್ರ ನೀರಾವರಿಗೆ ಹೋರಾಟ ಹುಣಸೆಕಟ್ಟೆ ಕಾಂತರಾಜ್ ಹೇಳಿಕೆ : ಭದ್ರಾ ಮೇಲ್ದಂಡೆ ಕಚೇರಿಯಲ್ಲಿ ಸಿಹಿ ಹಂಚಿಕೆ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆ.16: ಐವತ್ತು ವರ್ಷದ ಹೋರಾಟದ ಆರಂಭಿಕ ಫಲವಾಗಿ ಭದ್ರೆ ಜಿಲ್ಲೆಗೆ ಪ್ರವೇಶಿಸಿದ್ದು, ಇದೊಂದು ಸಂಭ್ರಮದ ಕ್ಷಣ ಎಂದು ರೈತಸಂಘದ ಮುಖಂಡ ಹುಣಸೆಕಟ್ಟೆ ಕಾಂತರಾಜ್ ಹೇಳಿದರು.

ಭೋವಿ ಮಠದ ವತಿಯಿಂದ ಭದ್ರಾ ಮೇಲ್ದಂಡೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಭದ್ರೆಗೆ ಬೃಹತ್ ಸಿಹಿ ಸಂಭ್ರಮ ಕಾರ್ಯಕ್ರಮದಲ್ಲಿ ಅಧಿಕಾರಿ ಇಂಜಿನಿಯರ್‌ಗಳು, ಸಿಬ್ಬಂದಿಗೆ
ಸಿಹಿ ವಿತರಿಸಿ ಮಾತನಾಡಿದರು.

ಪ್ರಾಯೋಗಿಕವಾಗಿ ಕಾಲುವೆಯಲ್ಲಿ ನೀರು ಹರಿಯುತ್ತಿರುವ ದೃಶ್ಯವೇ ರೋಮಾಂಚನಗೊಳಿಸಿದೆ. ಇನ್ನೂ ಕಾಲಕಾಲಕ್ಕೆ ನಿಗದಿತ ನೀರು ಹರಿದುಬಂದರೆ ಸಡಗರ ಮುಗಿಲುಮುಟ್ಟಲಿದೆ ಎಂದರು. ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ಭಾಗದಲ್ಲಿ ಭದ್ರೆ ನೀರು ಹರಿಯುತ್ತಿದ್ದು ಸಂಭ್ರಮವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಭೋವಿ ಮಠದ ವತಿಯಿಂದ ಸಿಹಿ ಹಂಚಿಕೆ
ಮಾಡುತ್ತಿರುವುದು ಸ್ವಾಗತರ್ಹ ಎಂದು ತಿಳಿಸಿದರು.
ಈ ಮಧ್ಯೆ ಜಿಲ್ಲೆಯಾದ್ಯಂತ ಭೀಕರ ಬರಗಾಲ ಎದುರುಗೊಂಡಿದೆ. ಕುಡಿಯುವ ನೀರಿಗೆ ಸಮಸ್ಯೆ
ಉಲ್ಬಣಗೊಂಡಿದೆ. ಕೆರೆ-ಕಟ್ಟೆಗಳು ಬರಿದಾಗಿದ್ದು, ತೋಟಗಳು ಒಣಗುತ್ತಿವೆ. ಇದಕ್ಕೆಲ್ಲ ಪರಿಹಾರ ಭದ್ರಾ ಮೇಲ್ದಂಡೆ ಯೋಜನೆ ಎಂದರು. ಇನ್ನೂ ಬಹಳಷ್ಟು ಕೆರೆಗಳು ಯೋಜನೆ ವ್ಯಾಪ್ತಿಯಿಂದ ಕೈಬಿಟ್ಟಿವೆ. ಮೊಳಕಾಲ್ಮೂರು,
ಚಳ್ಳಕೆರೆ, ಹೊಳಲ್ಕೆರೆ ಕೆರೆ-ಕಟ್ಟೆಗಳು ಸೇರ್ಪಡೆ ಆಗಬೇಕಿದೆ. ಜಗಳೂರಿಗೆ ನೀರು ಹರಿಯಬೇಕಿದೆ. ಒಟ್ಟಾರೆ ಸಮಗ್ರ ನೀರಾವರಿ ಯೋಜನೆ ಕಲ್ಪಿಸಲು ಸರ್ಕಾರ ಮುಂದಾಗಬೇಕು.
ಅಧಿಕಾರಿಗಳು, ಇಂಜಿನಿಯರ್‌ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದರು.

ರೈತಮುಖಂಡ ರಂಗೇಗೌಡ ಮಾತನಾಡಿ, ನನೆಗುದಿಗೆ ಬಿದ್ದಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ರಾಜಕೀಯ ಪಕ್ಷಗಳು ಜಿಲ್ಲೆಯನ್ನು ಸಂಪೂರ್ಣ ಹಸಿರುಗೊಳಿಸುವ ಕೆಲಸದಲ್ಲಿ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಕೋರಿದರು.

ತಾಪಂ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಮಾರಘಟ್ಟ ಜಯಪ್ಪ ಮಾತನಾಡಿ, ಬರಗಾಲದ ಭೀಕರತೆ ಈ
ವರ್ಷವೂ ಮುಂದುವರಿದಿದೆ. ಇದಕ್ಕೆ ಶಾಶ್ವತ ಪರಿಹಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮನ್ವಯತೆ ಸಾಧಿಸಿ ಜಿಲ್ಲೆಯ ಜನರನ್ನು ಸಂಕಷ್ಟದಿAದ ಪಾರು ಮಾಡಬೇಕೆಂದರು.

ವಕೀಲ ಪ್ರತಾಪ್ ಜೋಗಿ ಮಾತನಾಡಿ, ಪಿ.ಕೋದಂಡರಾಮಯ್ಯ, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್, ಬಂಜಗೆರೆ ಜಯಪ್ರಕಾಶ್ ಹಾಗೂ ಪತ್ರಕರ್ತರ ಹೋರಾಟ ಫಲಪ್ರದವಾಗಿದೆ. ಇಡೀ
ಜಿಲ್ಲೆ ಹಸಿರುಗೊಳ್ಳುವವರೆಗೂ ಚಳವಳಿಯ ಹಾದಿಯಲ್ಲಿ ಇನ್ನಷ್ಟು ಸಾಗಬೇಕಾಗಿದೆ ಎಂದು
ತಿಳಿಸಿದರು.

ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಪತ್ರಕರ್ತರು ಮುನ್ನಡೆಸಿದ ಹೋರಾಟದ ಹಾದಿ ಸುಧೀರ್ಘವಾಗಿದ್ದು, ಯೋಜನೆ ಜಾರಿಗೊಂಡ 15 ವರ್ಷದ ಬಳಿಕ ನೀರು ಹರಿದಿದೆ ಎಂದರು. ಅರ್ಧ ಕೆಲಸವಾಗಿದ್ದು, ಇನ್ನರ್ಧ ಕೆಲಸ ಪೂರ್ಣಗೊಳಿಸಲು ಸರ್ಕಾರ ಕಾಲಕಾಲಕ್ಕೆ ಅನುದಾನ
ಬಿಡುಗಡೆ ಮಾಡಬೇಕು. ಇಲ್ಲದಿದ್ದರೇ ಯೋಜನೆ ಪೂರ್ಣಗೊಳ್ಳಲು ಮತ್ತೇ 15 ವರ್ಷ ಆಗಲಿದೆ
ಎಂದು ಆತಂಕ ವ್ಯಕ್ತಪಡಿಸಿದರು. ನೀರು ತುಂಬಿಸುವ ಕೆರೆಗಳ ಸಂಖ್ಯೆ ಹೆಚ್ಚಾಗಿದ್ದು, ಹನಿನೀರಾವರಿ ವಿಸ್ತರಣೆಗೊಂಡಿದೆ.
ಇನ್ನಷ್ಟು ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸುವ ಕೆಲಸ ಆಗಬೇಕಿದೆ. ಒಟ್ಟಾರೆ ಸಮಗ್ರ ನೀರಾವರಿ ಯೋಜನೆಯತ್ತ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದರು.

ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಮಹೇಶಬಾಬು, ವಕೀಲರಾದ ಸೌಮ್ಯಾ, ಅಶ್ವಿನಿ, ರಜನಿ ಲೇಪಾಕ್ಷಿ, ಎಂ.ಜೆ.ತಿಪೇಸ್ವಾಮಿ, ಲಕ್ಷ್ಮಣ್, ಧನಂಜಯ್ಯ, ಮುಖಂಡರಾದ ಆಲ್ಕೆಣ್ಣ, ಮಾರುತೇಶ್, ಪುಟ್ಟಸ್ವಾಮಿ, ಲಕ್ಷ್ಮಣ್, ಟಿ.ಆರ್.ತಿಪ್ಪೇಸ್ವಾಮಿ, ಪತ್ರಕರ್ತರಾದ ವಿ.ಚಂದ್ರಪ್ಪ, ಭಕ್ತಪ್ರಹ್ಲಾದ್, ಗೌನಹಳ್ಳಿ ಗೋವಿಂದಪ್ಪ, ಡಿ.ತಿಪ್ಪೇಸ್ವಾಮಿ ಇತರರಿದ್ದರು.

_______________________________
ಸಂಕಟ ಬಿಟ್ಟು, ಚಳವಳಿಗೆ ಬನ್ನಿ :
ಭದ್ರಾ ಜಾರಿಗಾಗಿ ಹೋರಾಟ ಕೈಗೊಂಡಾಗ ಕೆಲವರು ಸಾಧ್ಯವೇ ಇಲ್ಲದ ಯೋಜನೆಯೆಂದು ನಿರುತ್ಸಾಹ ತೋರಿದರು. ಈಗ ನೀರು ಹರಿಯುತ್ತಿದ್ದಂತೆ ನಮ್ಮೂರು ಕೆರೆ ಕೈಬಿಟ್ಟಿದೆ
ಎಂದು ಸಂಕಟ ಪಡುತ್ತಿರುವುದು ಸಲ್ಲದು ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಚಳ್ಳಕೆರೆ ಬಸವರಾಜ್ ಹೇಳಿದರು. ಸಂಕಟ ಪಡುವುದಕ್ಕಿಂತ ಸಮಗ್ರ ನೀರಾವರಿ ಯೋಜನೆ ಜಾರಿ ಚಳವಳಿ ಜೊತೆಗೆ ಹೆಜ್ಜೆ ಹಾಕಬೇಕಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಒಂದೇಡೆ ಸೇರಿ ಕೂಗು ಹಾಕಿ ಕೇಂದ್ರ-ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು, ಯೋಜನೆಗೆ ರಾಷ್ಟ್ರೀಯ ಮನ್ನಣೆ ದೊರಕುವಂತೆ ಮಾಡಬೇಕಿದೆ. ಆಗ ಯೋಜನೆ ವ್ಯಾಪ್ತಿಗೆ ಎಲ್ಲ
ತಾಲ್ಲೂಕು, ಹಳ್ಳಿಗಳ ಕೆರೆಗಳು ಸೇರ್ಪಡೆ ಆಗಲಿವೆ ಎಂದರು.
_________________________
ನೀರಾವರಿ ಹೋರಾಟದಲ್ಲಿ ಮುರುಘ ಶರಣರು, ಶಾಂತವೀರ ಸ್ವಾಮೀಜಿ ಸೇರಿ ಬಹುತೇಕ ಮಠಾಧೀಶರು
ಪಾಲ್ಗೊಂಡಿದ್ದರು. ಈಗ ಭದ್ರೆ ನೀರು ಜಿಲ್ಲೆಗೆ ಪ್ರವೇಶಿಸಿದ ಸಂದರ್ಭ ಲಕ್ಷ ಸಿಹಿ ವಿತರಣೆ ಮೂಲಕ ಸಡಗರವನ್ನು ಸ್ಮರಣೀಯಗೊಳಿಸುವ ಕೆಲಸ ಭೋವಿ ಮಠ ಮಾಡುತ್ತಿದೆ.
 ಪ್ರತಾಪ್ ಜೋಗಿ, ವಕೀಲ
________________________

ಜಿಲ್ಲೆಗೆ ಭದ್ರೆ ನೀರು ಹರಿಯುವಲ್ಲಿ ಹೋರಾಟಗಾರರು, ಜನಪ್ರತಿನಿಧಿಗಳು, ಅಧಿಕಾರಿಗಳು,
ಇಂಜಿನಿಯರ್‌ಗಳ ಬದ್ಧತೆ ಅಡಗಿದೆ. ಜಿಲ್ಲೆಯ ರೈತರ ಬದುಕು ಹಸನಾಗಲಿ.
 ಪುಷ್ಪಾ, ಅಧಿಕಾರಿ, ಭದ್ರಾ ಮೇಲ್ದಂಡೆ ಯೋಜನೆ
_____________________________

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now