ಭಾರತೀಯರಿಗೆ ಚಿನ್ನದ ಮೇಲಿರುವ ಒಲವು ಕೇವಲ ಆಭರಣಕ್ಕಷ್ಟೇ ಸೀಮಿತವಾಗಿಲ್ಲ; ಆರ್ಥಿಕ ಸಂಕಷ್ಟದ ಸಮಯದಲ್ಲಿ ನೆರವಾಗುವ ಅತ್ಯಂತ ಸುರಕ್ಷಿತ ಹೂಡಿಕೆ ಎಂದೇ ಇದನ್ನು ನಂಬಲಾಗಿದೆ. ಹೀಗಿರುವಾಗ, ಪ್ರಸ್ತುತ 1 ಲಕ್ಷ ರೂಪಾಯಿಗಳನ್ನು ಚಿನ್ನದಲ್ಲಿ ಒಟ್ಟಾಗಿ ಹೂಡಿಕೆ ಮಾಡಿ, 10 ವರ್ಷಗಳ ಕಾಲ ಹಾಗೆಯೇ ಮುಂದುವರಿಸಿದರೆ ಭವಿಷ್ಯದಲ್ಲಿ ಆ ಮೊತ್ತ ಎಷ್ಟಾಗಬಹುದು ಎಂಬ ಕುತೂಹಲ ಹೂಡಿಕೆದಾರರಲ್ಲಿ ಮನೆಮಾಡಿದೆ.
ದೀರ್ಘಾವಧಿಯ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನವು ಅತ್ಯುತ್ತಮ ಲಾಭ ತಂದುಕೊಟ್ಟ ಇತಿಹಾಸವಿದೆ. ಹಿಂದಿನ ಅಂಕಿ-ಅಂಶಗಳನ್ನು ಗಮನಿಸಿದರೆ, ಚಿನ್ನದ ಸರಾಸರಿ ವಾರ್ಷಿಕ ಬೆಳವಣಿಗೆ ದರವು ಸುಮಾರು 13.8% ರಿಂದ 15% ರವರೆಗೆ ದಾಖಲಾಗಿದೆ. ಆದರೆ ಜಾಗತಿಕ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಕರೆನ್ಸಿ ಮೌಲ್ಯ ಮತ್ತು ಕೇಂದ್ರೀಯ ಬ್ಯಾಂಕುಗಳ ನೀತಿಗಳನ್ನು ಅವಲಂಬಿಸಿ ಈ ದರಗಳಲ್ಲಿ ಏರಿಳಿತಗಳು ಸಹಜ.
ಹಿಂದಿನ ಬೆಳವಣಿಗೆಯ ಆಧಾರದ ಮೇಲೆ ಅಂದಾಜು ಮಾಡಿದರೆ ಬರುವ ಆದಾಯ ಅತ್ಯಂತ ಆಕರ್ಷಕವಾಗಿದೆ. ಮುಂದಿನ 10 ವರ್ಷಗಳಲ್ಲಿ ಚಿನ್ನವು ಸರಾಸರಿ 8% ವಾರ್ಷಿಕ ಬೆಳವಣಿಗೆ ಕಂಡರೆ ನಿಮ್ಮ 1 ಲಕ್ಷ ಮೊತ್ತವು 2.16 ಲಕ್ಷ ರೂಪಾಯಿ ಆಗಲಿದೆ. ವಾರ್ಷಿಕ 10% ಬೆಳವಣಿಗೆಯಾದರೆ 2.59 ಲಕ್ಷ ರೂಪಾಯಿ, 12% ರಷ್ಟಾದರೆ 3.11 ಲಕ್ಷ ರೂಪಾಯಿ ಹಾಗೂ 13.8% ಬೆಳವಣಿಗೆಯಾದರೆ 3.64 ಲಕ್ಷ ರೂಪಾಯಿಗಳಿಗೆ ಏರಿಕೆಯಾಗುತ್ತದೆ. ಇನ್ನು ಐತಿಹಾಸಿಕ ಸರಾಸರಿ ಪ್ರಕಾರ 14.3% ವಾರ್ಷಿಕ ಆದಾಯ ದೊರೆತರೆ ಈ ಹೂಡಿಕೆ ಮೊತ್ತ ಬರೋಬ್ಬರಿ 3.81 ಲಕ್ಷ ರೂಪಾಯಿ ತಲುಪಲಿದೆ. ಒಂದು ವೇಳೆ ಗರಿಷ್ಠ ಮಟ್ಟದಲ್ಲಿ 15% ವಾರ್ಷಿಕ ಲಾಭ ದಾಖಲಾದರೆ, ಆ ಮೊತ್ತ ಬರೋಬ್ಬರಿ 4.05 ಲಕ್ಷ ರೂಪಾಯಿ ಮುಟ್ಟುವ ಸಾಧ್ಯತೆಯಿದೆ.
ಆದರೆ ಹೂಡಿಕೆದಾರರು ಇಲ್ಲಿ ಒಂದು ಪ್ರಮುಖ ಅಂಶವನ್ನು ನೆನಪಿನಲ್ಲಿಡಬೇಕು. ವಾರ್ಷಿಕ ಸರಾಸರಿ ಆದಾಯ ಎಂದರೆ ಪ್ರತಿ ವರ್ಷವೂ ಖಚಿತವಾಗಿ ಅಷ್ಟೇ ಪ್ರಮಾಣದಲ್ಲಿ ಬೆಲೆ ಏರುತ್ತದೆ ಎಂದಲ್ಲ. ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಏರಬಹುದು, ಇನ್ನು ಕೆಲವು ವರ್ಷಗಳಲ್ಲಿ ಇಳಿಕೆಯಾಗಬಹುದು ಅಥವಾ ಸ್ಥಿರವಾಗಿರಬಹುದು. ಹಾಗಾಗಿ ಹಿಂದಿನ ದಾಖಲೆಗಳು ಭವಿಷ್ಯದ ಲಾಭಕ್ಕೆ ಯಾವುದೇ ಖಚಿತ ಗ್ಯಾರಂಟಿ ನೀಡುವುದಿಲ್ಲ.
ಪ್ರಸ್ತುತ ಭೌತಿಕ ರೂಪದ ನಾಣ್ಯ ಅಥವಾ ಆಭರಣಗಳಿಗಿಂತ ಗೋಲ್ಡ್ ಇಟಿಎಫ್ (Gold ETF), ಗೋಲ್ಡ್ ಮ್ಯೂಚುವಲ್ ಫಂಡ್ಗಳು ಹಾಗೂ ಡಿಜಿಟಲ್ ಗೋಲ್ಡ್ ಮುಂತಾದ ಆಧುನಿಕ ಮಾರ್ಗಗಳು ಲಭ್ಯವಿವೆ. ಇವುಗಳ ನಿರ್ವಹಣಾ ಶುಲ್ಕ ಮತ್ತು ತೆರಿಗೆ ನಿಯಮಗಳನ್ನು ಸರಿಯಾಗಿ ಅರಿತು ಹೂಡಿಕೆ ಮಾಡುವುದು ಸೂಕ್ತ. ಅಷ್ಟೇ ಅಲ್ಲದೆ, ಹೂಡಿಕೆಯ ಅಪಾಯವನ್ನು ತಗ್ಗಿಸಲು ಕೈಯಲ್ಲಿರುವ ಎಲ್ಲಾ ಹಣವನ್ನು ಚಿನ್ನದಲ್ಲೇ ತೊಡಗಿಸದೆ, ಷೇರು ಮಾರುಕಟ್ಟೆ ಹಾಗೂ ಇತರ ಉಳಿತಾಯ ಯೋಜನೆಗಳ ಜೊತೆಗೆ ಚಿನ್ನದಲ್ಲೂ ಸಮತೋಲಿತವಾಗಿ ಹೂಡಿಕೆ ಮಾಡುವುದು ಜಾಣತನ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.











