Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

UPI, RuPay ಬಳಕೆದಾರರಿಗೆ ಕೇಂದ್ರದಿಂದ ಸಿಹಿಸುದ್ದಿ : 2000 ರೂ.ವರೆಗಿನ ಪಾವತಿಗೆ ಶುಲ್ಕ ಇಲ್ಲ.!

---Advertisement---

ನವದೆಹಲಿ: ₹2,000 ವರೆಗಿನ ಏಕೀಕೃತ ಪಾವತಿ ಇಂಟರ್‌ಫೇಸ್ (ಯುಪಿಐ) ವಹಿವಾಟುಗಳು ಹಾಗೂ ರುಪೇ ಡೆಬಿಟ್ ಕಾರ್ಡ್‌ಗಳ ಮೂಲಕ ನಡೆಸುವ ಪಾವತಿಗಳ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸದಂತೆ ಕೇಂದ್ರ ಸರ್ಕಾರ ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007 ರ ಸೆಕ್ಷನ್ 10ಎ ಅಡಿಯಲ್ಲಿ ಹಣಕಾಸು ಸಚಿವಾಲಯವು ಅಧಿಸೂಚನೆ ಹೊರಡಿಸಿದ್ದು, ಈ ನಿಗದಿತ ಪಾವತಿ ವಿಧಾನಗಳ ಮೂಲಕ ಹಣ ಪಾವತಿಸುವ ಅಥವಾ ಸ್ವೀಕರಿಸುವ ವ್ಯಕ್ತಿಯಿಂದ ಯಾವುದೇ ಬ್ಯಾಂಕ್ ಅಥವಾ ಸೇವಾ ಪೂರೈಕೆದಾರರು ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಯಾವುದೇ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

 

ಈ ಹೊಸ ನಿಯಮದ ಪ್ರಕಾರ ಸಣ್ಣ ಮೊತ್ತದ ಯುಪಿಐ ಪಾವತಿಗಳು ಮತ್ತು ರುಪೇ ಡೆಬಿಟ್ ಕಾರ್ಡ್ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿ ಮುಂದುವರಿಯಲಿವೆ. ₹2,000 ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರ (ಎಂ‍ಡಿಆರ್) ವಿಧಿಸುವ ಸಾಧ್ಯತೆಯನ್ನು ಸರ್ಕಾರ ಮುಕ್ತವಾಗಿರಿಸಿದೆಯಾದರೂ, ಈವರೆಗೆ ಯಾವುದೇ ಹೊಸ ಶುಲ್ಕ ಜಾರಿಗೆ ತಂದಿಲ್ಲ. ಭವಿಷ್ಯದಲ್ಲಿ ದೊಡ್ಡ ಮೊತ್ತದ ವಾಣಿಜ್ಯ ವಹಿವಾಟುಗಳ ಮೇಲೆ ನಾಮಮಾತ್ರದ ಎಂಡಿಆರ್ ವಿಧಿಸಿದರೂ ಅದನ್ನು ವ್ಯಾಪಾರಿಗಳೇ ಭರಿಸಬೇಕಾಗುತ್ತದೆ ಮತ್ತು ಗ್ರಾಹಕರ ನಡುವಿನ ನೇರ ವರ್ಗಾವಣೆ (ಪಿ2ಪಿ) ಎಂದಿನಂತೆ ಉಚಿತವಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ನಿರ್ವಹಿಸುವ ಯುಪಿಐ, ವಹಿವಾಟಿನ ಪ್ರಮಾಣದಲ್ಲಿ ವಿಶ್ವದ ಅತಿದೊಡ್ಡ ಚಿಲ್ಲರೆ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಕಳೆದ ಆಗಸ್ಟ್ ತಿಂಗಳಲ್ಲಿ 29.82 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬರೋಬ್ಬರಿ 2,451 ಕೋಟಿ ವಹಿವಾಟುಗಳು ದಾಖಲಾಗಿದ್ದು, ಇದರಲ್ಲಿ ಗೂಗಲ್ ಪೇ ಮತ್ತು ಫೋನ್‌ಪೇ ಸಂಸ್ಥೆಗಳ ಪಾಲು ಸುಮಾರು ಮುಕ್ಕಾಲು ಭಾಗದಷ್ಟಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಆರ್ಥಿಕವಾಗಿ ಮತ್ತಷ್ಟು ಸುಸ್ಥಿರಗೊಳಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಗಳನ್ನು ಪರಿಶೀಲಿಸುತ್ತಿದೆ.

Join WhatsApp

Join Now

Join Telegram

Join Now